Latest

ಕಾಂಗ್ರೆಸ್ ಶಾಸಕರೂ ಹೊರಟರು ರೆಸಾರ್ಟ್ ಗೆ!

     ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ನಾಲ್ವರು ಶಾಸಕರ ಗೈರು ಹಾಜರಿಯ ಮಧ್ಯೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಮುಕ್ತಾಯವಾಗಿದ್ದು, ಸಭೆ ಮುಗಿಯುತ್ತಿದ್ದಂತೆ ಶಾಸಕರನ್ನೆಲ್ಲ ರೆಸಾರ್ಟ್ ಗೆ ಕರೆದೊಯ್ಯಲಾಗಿದೆ.

ರಮೇಶ ಜಾರಕಿಹೊಳಿ, ಮಹೇಶ ಕುಮಟಳ್ಳಿ, ಉಮೇಶ ಜಾಧವ ಹಾಗೂ ನಾಗೇಂದ್ರ ಶಾಸಕಾಂಗ ಸಭೆಗೆ ಗೈರಾಗಿದ್ದರು. ಉಳಿದ 76 ಶಾಸಕರು ಸಭೆಗೆ ಹಾಜರಾಗಿದ್ದರೂ, ಬಿಜೆಪಿ ಶಾಸಕರು ಇನ್ನೂ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿರುವುದರಿಂದ ಕಂಗಾಲಾಗಿರುವ ಕಾಂಗ್ರೆಸ್ ತನ್ನ ಶಾಸಕರನ್ನೂ ಈಗಲ್ ರೆಸಾರ್ಟ್ ಗೆ ಕರೆದೊಯ್ದಿದೆ. ಎಷ್ಟು ದಿನ ರೆಸಾರ್ಟ್ ನಲ್ಲಿರಬೇಕು ಎನ್ನುವುದನ್ನು ಯಾರಿಗೂ ತಿಳಿಸಲಾಗಿಲ್ಲ.

ಶನಿವಾರ 6 ಶಾಸಕರು ರಾಜಿನಾಮೆ ನೀಡಲಿದ್ದಾರೆ 21ರಂದು ಮತ್ತೆ ಕೆಲವರು ರಾಜಿನಾಮೆ ನೀಡಲಿದ್ದಾರೆ ಎನ್ನುವ ದಟ್ಟ ವದಂತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ನಡುಕ ಹುಟ್ಟಿದೆ. ಹಾಗಾದಲ್ಲಿ ಸರಕಾರ ಅಲ್ಪಮತಕ್ಕೆ ಕುಸಿಯಬಹುದು ಎನ್ನುವ ಆತಂಕ ಉಂಟಾಗಿದೆ.

ಬಿಜೆಪಿ ರೆಸಾರ್ಟ್ ವಾಸ್ತವ್ಯ ಶನಿವಾರ ಮುಕ್ತಾಯವಾಗಬೇಕಿದ್ದರೂ ಕಾಂಗ್ರೆಸ್ ಕೂಡ ರೆಸಾರ್ಟ್ ಗೆ ತೆರಳಿದ್ದರಿಂದ ಮುಂದಿನ ನಡೆ ಕುತೂಹಲ ಮೂಡಿಸಿದೆ. ಎರಡೂ ಪಕ್ಷಗಳು ಪರಸ್ಪರರ ಶಾಸಕರನ್ನು ಸೆಳೆಯುವ ಪ್ರಯತ್ನ ಜೋರಾಗಿ ಮಾಡುಲ ಸಾಧ್ಯತೆ ಇದೆ. ಹಾಗಾಗಿ ರಾಜ್ಯದ ರಾಜಕೀಯ ಈಗ ಮತ್ತಷ್ಟು ಕುತೂಹಲದತ್ತ ತಿರುಗಿದೆ.

ಒಟ್ಟಾರೆ, ಎರಡೂ ಪಕ್ಷಗಳು ರೆಸಾರ್ಟ್ ರಾಜಕೀಯದಲ್ಲಿದ್ದು, ರಾಜ್ಯದ ಜನರ ಸ್ಥಿತಿ, ಬರ ಪರಿಸ್ಥಿತಿ ಕೇಳುವವರಿಲ್ಲವಾಗಿದೆ. 

ಶಾಸಕಾಂಗ ಸಭೆಗೆ ಗೈರಾದವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದ ಕಾಂಗ್ರೆಸ್ ಈಗ ನಾಲ್ವರ ಶಾಸಕರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿದೆ ಕಾದು ನೋಡಬೇಕಿದೆ. ಅಥವಾ ಕ್ರಮ ಕೈಗೊಳ್ಳುವ ಮೊದಲು ಶಾಸಕರೇ ರಾಜಿನಾಮೆ ನೀಡುತ್ತಾರೆಯೋ ಶನಿವಾರ ಗೊತ್ತಾಗಲಿದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button