ಪ್ರಗತಿವಾಹಿನಿ ಸುದ್ದಿ, ಹಿರೇಬಾಗೇವಾಡಿ :
ಸಮೀಪದ ಗುಡ್ಡದ ಮಲ್ಲಪ್ಪನ ಪ್ರದೇಶದಲ್ಲಿರುವ ಕಾಡು ಪ್ರಾಣಿಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಅರಣ್ಯ ಇಲಾಖೆಯು ನೀರ್ಲಕ್ಷ ವಹಿಸಿದೆ ಎಂದು ರೈತ ವೈಜನಾಥ ಶಿವರಾಯಗೌಡ ಪಾಟೀಲ ಆರೋಪಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾನ ಮನಸ್ಕರೊಂದಿಗೆ ಸೇರಿ ಗುಡ್ಡದಲ್ಲಿರುವ ಕಾಡು ಪ್ರಾಣಿಗಳಿಗೆ ನೀರು ಕಲ್ಪಿಸುವ ನಿಟ್ಟಿನಲ್ಲಿ ಹೊಂಡವನ್ನು ತೋಡಿದ್ದು ಕುಡಿಯಲು ನೀರು ಪೂರೈಕೆಯನ್ನು ಮಾಡಿದ್ದೇವೆ. ಆದರೆ ಈಗ ಇಲಾಖೆಯ ನಿರ್ಲಕ್ಷತನದಿಂದಾಗಿ ಈ ಭಾಗದಲ್ಲಿಯ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಜಾಲ ಸಕ್ರೀಯವಾಗಿದೆ. ರಾಷ್ಟ್ರಪಕ್ಷಿ ನವಿಲು, ಮೊಲ, ಕಾಡುಹಂದಿ, ಜಿಂಕೆ, ಮಂಗ, ನರಿ ಸೇರಿದಂತೆ ವಿವಿಧ ಪ್ರಾಣಿಗಳು ಬೇಟೆಗಾರರ ಕ್ರೌರ್ಯಕ್ಕೆ ಬಲಿಯಾಗುತ್ತಿವೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂದು ದೂರಿದರು.
ಸಮಾಜ ಸೇವಕ ಬಾಪು ನಾವಲಗಟ್ಟಿ ಮಾತನಾಡಿ, ಬೆಳೆದು ನಿಂತ ಸಾಕಷ್ಟು ಮರಗಳು ಸೂಕ್ತ ರಕ್ಷಣೆಯಿಲ್ಲದೆ ಬಳಕೆದಾರರ ಪಾಲಾಗುತ್ತಿವೆ. ಇಲಾಖೆಯ ಪೂರ್ವಾನುಮತಿ ಇಲ್ಲದೆ ಧರೆಗುರುಳಿದರೂ ಈ ಬಗ್ಗೆ ಸಾಮಾಜಿಕ ಅರಣ್ಯ ಇಲಾಖೆಯು ಜಾಣ ಮೌನ ವಹಿಸಿದೆ ಎಂದು ಅರಣ್ಯ ಇಲಾಖೆಯ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು.
ಹೊಯ್ಸಳ ಸಂಸ್ಥೆಯ ಅಧ್ಯಕ್ಷ ಮಂಜುನಾಥ ವಸ್ತ್ರದ ಮಾತನಾಡಿ, ಬಂಡೀಪುರ ಅಭಯಾರಣ್ಯವೂ ಸೇರಿದಂತೆ ಉತ್ತರ ಕರ್ನಾಟಕದ ಗದಗ ಬಳಿಯ ಕಪ್ಪತ ಗುಡ್ಡದವರೆಗೂ ಸಹ ಅಗ್ನಿಯ ಜ್ವಾಲೆ ಮುಂದುವರೆದು ಅಪಾರ ಪ್ರಮಾಣದ ವನ ಸಂಪತ್ತು ಹಾಗೂ ಪ್ರಾಣಿ ಪಕ್ಷಿಗಳ ಮಾರಣ ಹೋಮವೆ ನಡೆದು ಹೋಗಿದೆ. ಅಧಿಕಾರಿಗಳ ಹೇಳಿಕೆಯ ಪ್ರಕಾರ ಇದು ಪ್ರತಿವರ್ಷ ಬೇಸಿಗೆ ಕಾಲದಲ್ಲಿ ನಡೆಯಬಹುದಾದ ಸಾಮಾನ್ಯ ಪ್ರಕ್ರಿಯ ಎಂದರೂ ಸಹ ಅತ್ಯಂತ ಗಂಭೀರ ವಿಚಾರ. ಕಾಡ್ಗಿಚ್ಚಿನ ವಿಷಯದಲ್ಲಿ ಉದಾಸೀನತೆಯಾದರೆ ಅದು ಪರಿಸರ ಹಾಗೂ ಇಡೀ ಜೀವಸಂಕುಲದ ಮೇಲೆ ಗಂಭೀರ ಪರಿಣಾಮ ಉಂಟಾಗುವುದು ಎಂದರು.
ವರ್ತಕ ಎಸ್.ಎಮ್.ಪಾಟೀಲ, ಬಸವರಾಜ ನಾಯ್ಕರ ಉಪಸ್ಥಿತರಿದ್ದರು.
(ಈ ಸುದ್ದಿಯನ್ನು ನಿಮ್ಮ ಪರಿಚಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ)