Latest

ಕಾಳಿ, ಘಟಪ್ರಭಾ ಮತ್ತು ಮಲಪ್ರಭಾ ನದಿ ಜೋಡಣೆಗೆ ವಿರೋಧ

ಪ್ರಗತಿವಾಹಿನಿ ನ್ಯೂಸ್, ಕಾರವಾರ:

ಕಾರವಾರ ಕಾಳಿ, ಘಟಪ್ರಭಾ ಮತ್ತು ಮಲಪ್ರಭಾ ನದಿ ಜೋಡಣೆ ಬಗ್ಗೆ ಸಂಗಮೇಶ ನಿರಾಣಿ ವರದಿಯನ್ನು ಅನುಷ್ಠಾನಕ್ಕೆ ತರಲು ಉತ್ತರ ಕರ್ನಾಟಕದ ರಾಜಕಾರಣಿಗಳು,ಮಠಾಧೀಶರು ಮಾಡುತ್ತಿರುವ ಪ್ರಯತ್ನ ಖಂಡನೀಯವಾಗಿದೆ ಎಂದು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತಾ ಹೇಳಿದರು.

ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಕ ಜಿಲ್ಲೆಯ ಜೀವನದಿಯಾದ ಕಾಳಿ ನದಿಯನ್ನು ಬಯಲು ಸೀಮೆಯ ಕಡೆಗೆ ತಿರುಗಿಸುವ ಈ ಪ್ರಯತ್ನ ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನೊಂದು ಎತ್ತಿನಹೊಳೆ ಹೋರಾಟಕ್ಕೆ ಕಾರಣವಾಗಬಹುದು. ಇಡೀ ಭಾರತಕ್ಕೆ ಮುಂಗಾರು ಮಳೆಯನ್ನು ತರುವ ಪಶ್ಚಿಮಘಟ್ಟ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಅದರಲ್ಲೂ ಜೊಯಿಡಾ ಹಾಗೂ ದಾಂಡೇಲಿ ಭಾಗಗಳು ಸೂಕ್ಷ್ಮ ಜೀವ ವಲಯ ವ್ಯಾಪ್ತಿಯಲ್ಲಿ ಬರುತ್ತವೆ. ಪಶ್ಚಿಮಘಟ್ಟವನ್ನು ಪಾರಂಪರಿಕ ತಾಣವೆಂದು ಯುನೆಸ್ಕೊ ಈಗಾಗಲೇ ಘೋಷಿಸಿದೆ. ಈ ಕಾಳಿ ನದಿಯು ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಜೊಯಿಡಾ ಕಾಯ್ದಿಟ್ಟ ಅರಣ್ಯ ಪ್ರದೇಶದ ಮೂಲಕ ಹಾದು ಹೋಗುತ್ತಿದೆ. ಕಾಡು ಪ್ರಾಣಿಗಳು ನದಿ ನೀರು ಕುಡಿದು ಬದುಕುತ್ತವೆ. ನದಿಯನ್ನು ತಿರುಗಿಸಲು ಯತ್ನಿಸಿದರೆ ದೇಶದ ಪರಿಸರದ ಮೇಲೆ ದುಷ್ಪರಿಣಾಮ ಬೀರಲಿದೆ. ಹೀಗಾಗಿ ಇಂತಹ ಯಾವುದೇ ಪ್ರಯತ್ನಕ್ಕೂ ಸಂಘಟನೆಯು ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ ಎಂದರು.

ಈಗಾಗಲೇ ಕಾಳಿ ನದಿ ನಂಬಿ ಬದುಕುತ್ತಿದ್ದ ಮೀನುಗಾರರು ಹಣಕೋಣ ಉಷ್ಣಸ್ಥಾವರ ವಿರೋಧಿಸಿ ಹೋರಾಟ ಮಾಡಿದ್ದರು. ಅದರ ಫಲವಾಗಿ ಇಂಡ್ ಭಾರತ್ ಕಂಪನಿ ಇಲ್ಲಿಂದ ಕಾಲುಕಿತ್ತಿದೆ.ನದಿ ಜೋಡಣೆ ಯೋಜನೆಯಿಂದ ನದಿಯನ್ನೆÃ ನಂಬಿ ಬದುಕುತ್ತಿರುವ ಮೀನುಗಾರರು ಬೀದಿ ಪಾಲಾಗಲಿದ್ದಾರೆ.ಈ ಯೋಜನೆಯಿಂದ ಚಿಪ್ಪೆಕಲ್ಲು,ಕಲ್ವಾ ಮುಂತಾದ ಅಮೂಲ್ಯ ಜೀವ ಪ್ರಬೇಧಗಳ ನದಿ ಸಂಪನ್ಮೂಲಗಳು ನಾಶವಾಗಲಿವೆ.
ಅರಬ್ಬೀ ಸಮುದ್ರಕ್ಕೆ ಕಾಳಿ ನದಿಯ ನೀರು ಸೇರುವುದರಿಂದ ಈ ನೀರು ವ್ಯರ್ಥವಾಗುತ್ತದೆ ಎಂಬ ವಾದವನ್ನು ಮಂಡಿಸುತ್ತಿರುವವರಿಗೆ ಸಮುದ್ರದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅವೈಜ್ಞಾನಿಕ ಚಿಂತನೆ ನಡೆಸಿ ನದಿ ನೀರು ಸಮುದ್ರಕ್ಕೆ ಸೇರಿ ಪೋಲಾಗುತ್ತಿದೆ ಎಂದು ವಾದಿಸುತ್ತಾರೆ. ಉಪ್ಪು ಮಿಶ್ರಿತ ಸಮುದ್ರದ ನೀರಿಗೆ ನದಿ ಮೂಲಕ ಸಿಹಿ ನೀರು ಸೇರುವುದು ಪ್ರಕೃತಿ ಸಹಜ ಗುಣವಾಗಿದೆ. ಇದು ಕಾಳಿ ನದಿಯನ್ನು ತಿರುಗಿಸಿ ಬಯಲು ಸೀಮೆಗೆ ಒಯ್ಯಲಿಕ್ಕೆ ವರದಿಯನ್ನು ಮಂಡಿಸಿದ ಸಂಗಮೇಶ ನಿರಾಣಿಯವರಿಗೆ ತಿಳಿದಿಲ್ಲದಿರುವುದು ನಿಜಕ್ಕೂ ವಿಷಾಧನೀಯ ಎಂದು ಆಕ್ರೊÃಷ ವ್ಯಕ್ತಪಡಿಸಿದರು.

ಜಿಲ್ಲೆಯ ಜೊಯಿಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿ ಕಾರವಾರದಲ್ಲಿ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಈ ನದಿಗೆ ಅಡ್ಡಲಾಗಿ ಸೂಪಾ, ಕೊಡಸಳ್ಳಿ, ಕದ್ರಾ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ.ಅಲ್ಲದೇ ಕುಡಿಯುವ ನೀರಿಗಾಗಿ ಹಲವಾರು ಸಣ್ಣ ಸಣ್ಣ ಚೆಕ್‌ಡ್ಯಾಮಗಳಿವೆ. ಕೈಗಾ ಅಣುವಿದ್ಯುತ್ ಕೇಂದ್ರ ಇದೆ. ಈ ನದಿ ಪಶ್ಚಿಮ ಘಟ್ಟದ ಜೀವ ವೈವಿಧ್ಯತೆಯ ಜತೆಗೆ ಅತ್ಯಂತ ಸೂಕ್ಷ್ಮ ಜೀವವಲಯವಾದ ಮಧ್ಯ ಪಶ್ಚಿಮ ಘಟ್ಟದ ಪ್ರದೇಶದಿಂದ ಹರಿಯುತ್ತಿದೆ. ಇಂತಹ ನದಿಯನ್ನು ತಿರುಗಿಸಲು ಯತ್ನಿಸುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇಂತಹ ಅವೈಜ್ಞಾನಿಕ ಧೋರಣೆಯಿಂದ ಪ್ರಕೃತಿಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ. ನದಿಗಳ ಜೋಡಣೆ ಹಿಂದೆ ಬೆಳಗಾವಿಯ ಸಕ್ಕರೆ ಕಾರ್ಖಾನೆಗಳ ಲಾಬಿ ಇದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಇಲ್ಲಿನ ಸ್ಥಳೀಯ ರಾಜಕಾರಣಿಗಳು, ಜನಪ್ರತಿನಿಧಿಗಳು ಮತ್ತು ಮೀನುಗಾರರ ಹಾಗೂ ಪರಿಸರವಾದಿಗಳ ಸಭೆ ಕರೆದು ಯೋಜನೆಯ ಸಾಧಕ,ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಸಭೆಯಲ್ಲಿ ಜೊಯಿಡಾದ ಗಣೇಶ್ ಹೆಗಡೆ ಸೇರಿದಂತೆ,ಜಿಲ್ಲೆಯ ಪ್ರಮುಖ ಚಿಂತಕರು ಭಾಗವಹಿಸಲಿದ್ದಾರೆ. ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆನಂದು ಮಡಿವಾಳ್, ದೀಪಕ ಕುಡಾಳಕರ, ಮದನ ಗುನಗಿ, ಮಂಗೇಶ ನಾಯ್ಕ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button