ಪ್ರಗತಿವಾಹಿನಿ ಸುದ್ದಿ, ಗೋಕಾಕ :
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೃಷಿ ಅಭಿಯಾನಕ್ಕೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಸೋಮವಾರ ನಗರದ ಎನ್ಎಸ್ಎಫ್ ಅತಿಥಿ ಗೃಹದಲ್ಲಿ ಅರಭಾವಿ ಹಾಗೂ ಕೌಜಲಗಿ ಹೋಬಳಿಗಳ ಮಾಹಿತಿ ರಥಗಳಿಗೆ ಚಾಲನೆ ನೀಡಿದ ಅವರು, ರೈತರ ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಿಸಿ ಆರ್ಥಿಕ ಮಟ್ಟವನ್ನು ದ್ವಿಗುಣಗೊಳಿಸುವಂತೆ ರೈತರಿಗೆ ಕರೆ ನೀಡಿದರು.
ಕೃಷಿಗೆ ಪೂರಕವಾದ ಇಲಾಖೆಗಳಾದ ತೋಟಗಾರಿಕೆ, ಪಶು ಸಂಗೋಪನೆ, ರೇಷ್ಮೆ, ಅರಣ್ಯ ಇಲಾಖೆಗಳ ಸಹಯೋಗದೊಂದಿಗೆ ಅರಭಾವಿ ಮತ್ತು ಕೌಜಲಗಿ ಹೋಬಳಿಗಳ ಎಲ್ಲ ಗ್ರಾಮ ಪಂಚಾಯತಿಗಳಿಗೆ ಮಾಹಿತಿ ರಥದೊಂದಿಗೆ ಸಂಚರಿಸಿ ರೈತರಿಗೆ ವಿವಿಧ ಇಲಾಖೆಗಳಲ್ಲಿ ಸಿಗುತ್ತಿರುವ ಸಹಾಯ ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಮತ್ತು ರೈತರ ಆರ್ಥಿಕಾಭಿವೃದ್ಧಿ ಹೆಚ್ಚಿಸುವ ತಾಂತ್ರಿಕತೆಗಳನ್ನು ರೈತರ ಮನೆ ಬಾಗಿಲಿಗೆ ಮುಟ್ಟಿಸುವ ವಿನೂತನ ಕಾರ್ಯಕ್ರಮ ಕೃಷಿ ಅಭಿಯಾನದ್ದಾಗಿದೆ ಎಂದು ಹೇಳಿದರು.
ರೈತರಿಗೆ ಬೀಜ ವಿತರಣೆ :
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇದೇ ಸಂದರ್ಭದಲ್ಲಿ ೨೦೧೯-೨೦ನೇ ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಿಸಿದರು.
ಜಿಪಂ ಸದಸ್ಯ ಗೋವಿಂದ ಕೊಪ್ಪದ, ಮಾಜಿ ಜಿಪಂ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ, ತಾಲೂಕಾ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ, ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ, ಲಕ್ಷ್ಮಣ ಬಂಡ್ರೊಳಿ, ಸತ್ತೆಪ್ಪ ಗಡಾದ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ