ಪ್ರಗತಿವಾಹಿನಿ ಸುದ್ದಿ, ಮಾಂಜರಿ (ಚಿಕ್ಕೋಡಿ)
ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಮಂಗಳವಾರ ಚಿಕ್ಕೋಡಿ ತಾಲೂಕಿನ ಕಲ್ಲೋಳ ಹಾಗೂ ಯಡೂರ ಗ್ರಾಮಗಳ ಮಧ್ಯದಲ್ಲಿರುವ ಕೃಷ್ಣಾ ಮತ್ತು ಧೂಧಗಂಗಾ ನದಿಯ ಸಂಗಮದಲ್ಲಿ ಯಡೂರಿನ ಕಾಡಸಿದ್ದೇಶ್ವರ ಹಾಗೂ ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿ ಹಾಗೂ ಶ್ರೀಶೈಲ ಜಗದ್ಗುರುಗಳಾದ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಪುಣ್ಯ ಸ್ನಾನಮಾಡಿದರು.
ಜೊತೆಗೆ, ನದಿ ತೀರದಲ್ಲಿ ಇನ್ನೂ ಹಲವಾರು ಶ್ರೀಗಳು ಹಾಗೂ ಭಕ್ತರ ಸಮ್ಮುಖದಲ್ಲಿ ಈಷ್ಟಲಿಂಗ ಪೂಜೆಯನ್ನು ನೆರವೇರಿಸಿದರು.
ಈಷ್ಟಲಿಂಗ ಪೂಜೆಯ ನಂತರ ಶ್ರೀಶೈಲ ಜಗದ್ಗುರುಗಳು ಮಾತನಾಡಿ, ಮನುಷ್ಯ ಆಧ್ಯಾತ್ಮಿಕವಾಗಿ ಮುನ್ನಡೆದಂತೆ ಆಯುಷ್ಯ ಆರೋಗ್ಯ ಬುದ್ದಿಮತ್ತೆ ವೃದ್ದಿಸುತ್ತದೆ. ಆಧ್ಯಾತ್ಮ ವಿದ್ಯೆಯನ್ನು ಭೋಧಿಸುವ ಗ್ರಂಥಗಳು ಪ್ರಮುಖವಾಗಿ ಮೂರು, ಅವುಗಳೆಂದರೆ ಉಪನಿಷತ್ತ್ ಗಳು, ಭಗವದ್ಗೀತೆ, ಬ್ರಹ್ಮಸೂತ್ರ. ಇತ್ತಿಚೆಗೆ ಮನುಷ್ಯನ ಮಾನಸಿಕ ಚಂಚಲತೆ ಅತಿಯಾಗಿದೆ. ಅದು ಇನ್ನೂ ಹೆಚ್ಚಾದಾಗ ಖಿನ್ನತೆ ಎನಿಸಿಕೊಳ್ಳುತ್ತದೆ. ಇದರಿಂದ ದೂರವಾಗಲು ನಮ್ಮ ಮನಸ್ಸನ್ನು ಆಧ್ಯಾತ್ಮಿಕತೆಯತ್ತ ಕೇಂದ್ರಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಹುಕ್ಕೇರಿ ಹಿರೆಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ದಕ್ಷಿಣ ಕಾಶಿಯೆಂದೆ ಪ್ರಸಿದ್ದಿ ಪಡೆದಿರುವ ಯಡೂರಿನ ಕೃಷ್ಣಾ ನದಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಆಂದ್ರಪ್ರದೇಶ ಸೇರಿದಂತೆ ವಿವಿಧ ಭಾಗಗಳಿಂದ ಜನರು ಇಲ್ಲಿ ಪವಿತ್ರ ಸ್ನಾನವನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಮಕರ ಸಂಕ್ರಮಣದ ಪವಿತ್ರ ದಿನದಂದು ಸಕಲ ಭಕ್ತಾದಿಗಳ ಜೀವನ ನೆಮ್ಮದಿಯಿಂದ ಕೂಡಿರಲಿ ಎಂದು ಅವರು ಹೇಳಿದರು.
ಪವಿತ್ರ ಸ್ನಾನದಲ್ಲಿ ಜಮಖಂಡಿ ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯರು, ಕೊಟ್ಟೂರಿನ ಜಾನುಕೋಲಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಬೆಂಗಳೂರು ವಿಭೂತಿ ಮಠದ ಮಹಂತಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಶಹಾಪೂರ ಹೀರೆಮಠದ ಸೂರಗೂರೇಶ್ವರ ಶಿವಾಚಾರ್ಯ ಸ್ವಾಮೀಜಿಗಳು, ಜಮಖಂಡಿ ಮುತ್ತಿನಕಂಠ ಮಠದ ಶೀವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು, ಕೊಣ್ಣೂರಿನ ಹೊರಗಿನ ಮಠದ ಡಾ. ವಿಶ್ವಪ್ರಭುದೇವ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ ಬೆಳಗಾವಿ, ವಿಜಾಪುರ, ಬಾಗಲಕೋಟ, ಜಿಲ್ಲೆಯ ಜೊತೆಗೆ ನೆರೆಯ ಮಹಾರಾಷ್ಟ್ರ ರಾಜ್ಯದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ