ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಕೇಂದ್ರ ಕಾರಾಗೃಹದಲ್ಲಿ ಶಿಕ್ಷಾಬಂಧಿಗಳಿಗಾಗಿ 2 ತಿಂಗಳವರೆಗೆ ಆಯೋಜಿಸಲಾಗಿದ್ದ ಕಾನೂನು ಸಾಕ್ಷರತಾ ಅಭಿಯಾನದ ಸಮಾರೋಪ ಸಮಾರಂಭ ಜರುಗಿತು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಶಿಬಿರ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾನೂನು ಸಾಕ್ಷರತಾ ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಮುಖ್ಯ ನ್ಯಾಯಿಕ ದಂಡಾಧಿಕಾರಿ ಕಿರಣ ಕಿಣಿ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ತ್ರ ನ್ಯಾಯಾಲಯದ ನ್ಯಾಯಾಧೀಶ ಮರುಳಸಿದ್ಧ ಆರಾಧ್ಯ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಕಾರಾಗೃಹದ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ವಹಿಸಿದ್ದರು.
ಕಾರ್ಯಕ್ರಮ ಉದ್ದೇಶಿಸಿ ಕಿರಣ ಕಿಣಿ ಮಾತನಾಡಿ, ಪ್ರಾಧಿಕಾರವು ಬಂಧಿಗಳಿಗಾಗಿ ಕಾನೂನಿನ ಕುರಿತು ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸದಾಕಾಲ ಕರ್ತವ್ಯ ನಿರ್ವಹಿಸುತ್ತಿದೆ. ಪ್ರಥಮ ಭಾರಿಗೆ ಶಿಕ್ಷಾ ಬಂಧಿಗಳಿಗೆ ಕಾನೂನು ಕುರಿತು ವಿವಿಧ ವಿಷಯಗಳ ಬಗ್ಗೆ ನ್ಯಾಯವಾಧಿಗಳಿಂದ 2 ತಿಂಗಳವರೆಗೆ ಕಾನೂನು ಸಾಕ್ಷರತ ಅಭಿಯಾನವನ್ನು ಏರ್ಪಡಿಲಾಗಿತ್ತು ಅಭಿಯಾನದಲ್ಲಿ ಜಾಮೀನು ಅರ್ಜಿಯನ್ನು ಸಲ್ಲಿಸುವ ಕುರಿತು, ಪೆರೋಲ್ ಅರ್ಜಿ ಸಲ್ಲಿಸುವ ಕುರಿತು, ನಿಗದಿತ ಸಮಯದೊಳಗೆ ಮೇಲ್ಮನವಿ ಸಲ್ಲಿಸುವ ಕುರಿತು ಹಾಗೂ ಬಂಧಿಗಳ ಕ್ಷಮಾ ಹಕ್ಕುಗಳ ಬಗ್ಗೆ ವಿವಿಧ ನ್ಯಾಯವಾದಿಗಳು ಮಾಹಿತಿ ನೀಡಿದ್ದಾರೆ. ಬಂಧಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮರುಳ ಸಿದ್ಧ ಆರಾಧ್ಯ ಮಾತನಾಡಿ, ನಿವಾಸಿಗಳಿಗೆ ತಾಳ್ಮೆಯ ಮಹತ್ವವನ್ನು ತಿಳಿಸಿದರು. ಯಾವುದೇ ಕೆಲಸ ಮಾಡುವಾಗ ಒಂದು ಕ್ಷಣ ಆಲೋಚನೆ ಮಾಡಬೇಕು. ತಾವು ಮಾಡಿದ ತಪ್ಪನ್ನು ಜೀವನದಲ್ಲಿ ಎಂದಿಗೂ ಮಾಡಬಾರದು ಎಂದರು.
ನ್ಯಾಯವಾಧಿ ಮಹಾನಂದಾ ಪಾಟೀಲ ಮಾತನಾಡಿ, 2 ತಿಂಗಳ ಕಾನೂನು ಅಭಿಯಾನದಲ್ಲಿ ಸುಮಾರು 34 ಅರ್ಜಿಗಳನ್ನು ಬಂಧಿಗಳಿಂದ ಸ್ವೀಕರಿಸಲಾಗಿದ್ದು, ಅವುಗಳನ್ನು 14 ಅರ್ಜಿಗಳಿಗೆ ಇತ್ಯರ್ಥಗೊಳಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ಎಸ್.ವಿ.ಮೋಟಗಿ, ಎಸ್.ಎಮ್.ಖಾನಾಪೂರ, ಭಾರತಿ ವಾಳವೆಕರ 2 ತಿಂಗಳವರೆಗೆ ವಿವಿಧ ವಿಷಯಗಳ ಕುರಿತು ನಿವಾಸಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜೈಲರ್‌ಗಳಾದ ಸಿದ್ರಾಮ ಪಾಟೀಲ, ಐ.ಎಸ್.ಹಿರೇಮಠ, ಎಮ್.ಎಮ್.ಮರಕಟ್ಟಿ ಉಪಸ್ಥಿತರಿದ್ದರು. ಸಿದ್ಧರಾಮ ಪಾಟೀಲ, ರಮೇಶ ಹಾಗೂ ಯುಸುಫ ಅನಿಸಿಕೆಗಳನ್ನು ಹಂಚಿಕೊಂಡರು. ಸುಲ್ತಾನ ಸ್ವಾಗತಿಸಿದರು. ಎಸ್.ಎಮ್. ಕಮತೆ ಪ್ರಾರ್ಥಿಸಿದರು. ಜೈಲರ ಸಿದ್ರಾಮ ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ