ಸಂತೋಷಕುಮಾರ ಕಾಮತ, ಮಾಂಜರಿ:
ರಾಜ್ಯದಲ್ಲಿನ ಸಮಿಶ್ರ ಸರಕಾರ ಉತ್ತರಕರ್ನಾಟಕ ಬಗ್ಗೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಕೂಗು ಈ ಭಾಗದ ಜನರಿಂದ ಪದೇ ಪದೇ ಕೇಳುತ್ತಲೆಯಿದೆ. ಇದೀಗ ಅಂತಹ ಕೂಗು ಮತ್ತೊಮ್ಮೆ ಉತ್ತರಕರ್ನಾಟಕದ ಜನರಿಂದ ಕೇಳಿಬರುವಂತಾಗಿದೆ. ಕಳೆದ ಎರಡು ತಿಂಗಳಿನಿಂದ ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿ ಒಡಲು ಬತ್ತಿ ಬರಿದಾಗಿದೆ. ಕೃಷ್ಣಾ ನದಿ ತೀರದಲ್ಲಿ ಬರುವ ಬೆಳಗಾವಿ, ವಿಜಯಪುರ, ಬಾಗಲಕೋಟ, ರಾಯಚೂರು ಜಿಲ್ಲೆಗಳ ಸಾವಿರಾರು ಹಳ್ಳಿಯ ಜನರು ಜಲದಾಹ ತೀರಿಸಿಕೊಳ್ಳಲು ಪ್ರತಿನಿತ್ಯ ಪರದಾಡುವಂತಾಗಿದೆ. ಇನ್ನು ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್-ಬಿಜೆಪಿ ಜನಪ್ರತಿನಿಧಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್ ಹಾಗೂ ಅಲ್ಲಿನ ಜಲಸಂಪನ್ಮೂಲ ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಸೊಲ್ಲಾಪುರ ಹಾಗೂ ಜತ್ತ ತಾಲೂಕಿನ ಕೆಲವು ಪ್ರದೇಶಗಳಿಗೆ ಆಲಮಟ್ಟಿ ಡ್ಯಾನಿಂದ ಎರಡು ಟಿಎಂಸಿ ನೀರು ಹರಿಸಿದರೆ, ಕೋಯ್ನಾದಿಂದ ಎರಡು ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಅವರು ಷರತ್ತು ಹಾಕಿದ್ದರು.
ರಾಜ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಬೆಳಗಾವಿಯಲ್ಲೆ ಈ ಭಾಗದ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಸಭೆ ಕರೆದು ಪರಸ್ಪರ ನೀರು ಬಿಡುಗಡೆ ಬಗ್ಗೆ ಮಾತುಕತೆ ನಡೆಸಿ ಮಹಾರಾಷ್ಟ್ರದ ಷರತ್ತಿಗೆ ಒಪ್ಪಿಗೆ ಸೂಚಿಸಿದ್ದರು. ಅಲ್ಲದೆ ಕೃಷ್ಣಾ ನದಿಗೆ ನೀರು ಹರಿಸುವಂತೆ ಅವರು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಸಹ ಮಾಡಿದ್ದರು. ಸಭೆ ನಡೆಸಿ ಒಂದು ವಾರವಾದರೂ ಕೃಷ್ಣಾ ನದಿಗೆ ನೀರು ಮಾತ್ರ ಬಂದಿಲ್ಲ. ಇದರಿಂದಾಗಿ ನದಿ ತೀರದ ಜನರು ಪ್ರತಿನಿತ್ಯ ನೀರು ಇಂದು ಬರುತ್ತೆ, ನಾಳೆ ಬರುತ್ತೆ ಎಂಬ ನಿರೀಕ್ಷೆಯಲ್ಲೇ ಜನರು ಕಾಲ ಕಳೆಯುತ್ತಿದ್ದಾರೆ. ಮಹಾರಾಷ್ಟ್ರದ ಷರತ್ತಿಗೆ ರಾಜ್ಯ ಸರಕಾರ ಒಪ್ಪಿಗೆ ಸೂಚಿಸಿದ್ದರು ಸಹ ಕೃಷ್ಣಾ ನದಿಗೆ ನೀರು ಏಕೆ ಬರುತ್ತಿಲ್ಲ? ಎಂದು ಇಲ್ಲಿನ ಜನರು ಪ್ರಶ್ನಿಸುವಂತಾಗಿದೆ. ಪ್ರತಿ ವರ್ಷ ರಾಜ್ಯ ಸರಕಾರ ಕೃಷ್ಣಾ ನದಿಗೆ ನೀರು ಬಿಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿತ್ತು. ಈ ಬಾರಿ ಸರಕಾರ ಅಂತಹ ಪ್ರಯತ್ನ ಮಾಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಬಗ್ಗೆ ಮುಖ್ಯಮಂತ್ರಿ ಅವರು ಮೊಸಳೆ ಕಣ್ಣಿರು ಸುರಿಸುವುದನ್ನು ಬಿಟ್ಟು ಕೃಷ್ಣಾ ನದಿಗೆ ನೀರನ್ನು ಹರಿಸುವ ಮೂಲಕ ಅನ್ನದಾತರ ಸಂಕಷ್ಟಕ್ಕೆ ಬರುವಂತೆ ಜನರು ಒತ್ತಾಯಿಸಿದ್ದಾರೆ. ಇನ್ನು ಉತ್ತರಕರ್ನಾಟಕದ ಅಭಿವೃದ್ದಿಯಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಕೂಗಿಗೆ ಈಗ ಮತ್ತಷ್ಟು ಪುಷ್ಟಿ ದೊರೆತಂತಾಗಿದೆ.
ಉತ್ತರಕರ್ನಾಟಕದ ಜೀವನದಿ ಕೃಷ್ಣೆಗೆ ನೀರು ಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಈ ಭಾಗದ ಜನರು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿ ವರ್ಷ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿದಾಗಲೆಲ್ಲ ಮಾನವೀಯತೆ ಆಧಾರದ ಮೇಲೆ ನೀರು ಬಿಡುತ್ತಿದ್ದ ಮಹಾರಾಷ್ಟ್ರ ಸರಕಾರ ಈ ಬಾರಿ ರಾಜ್ಯದ ಜನರನ್ನು ಸತಾಯಿಸುತ್ತಿರುವುದು ಎರಡೂ ಸರಕಾರಗಳ ನಡೆ ಬಗ್ಗೆ ಜನರಲ್ಲಿ ಅನುಮಾನ ಮೂಡಿಸಿದೆ. ನೀರಿಗೆ ನೀರು ಕೊಡುವ ಷರತ್ತಿಗೆ ಎರಡೂ ಸರಕಾರಗಳು ಒಪ್ಪಿಕೊಂಡ ನಂತರವಾದರೂ ಕೃಷ್ಣಾ ನದಿಗೆ ಏಕೆ ನೀರು ಬರುತ್ತಿಲ್ಲ ಎಂದು ಉತ್ತರಕರ್ನಾಟಕದ ಜನರು ರಾಜ್ಯ ಸರಕಾರವನ್ನು ಪ್ರಶ್ನಿಸುವಂತಾಗಿದೆ. ಮುಖ್ಯ ಮಂತ್ರಿ ಎಚ್.ಡಿ.ಕುಮಾರಾಸ್ವಾಮಿ ಕೃಷ್ಣಾ ನದಿಗೆ ನೀರು ಹರಿಸಲು ಹೆಚ್ಚಿನ ಕಾಳಜಿ ತೋರುತ್ತಿಲ್ಲ. ಅದೇ ಕಾವೇರಿ ನದಿ ನೀರಿನ ಸಮಸ್ಯೆ ಬಂದಾಗ ರಾಜ್ಯದ ಬುದ್ದಿ ಜೀವಿಗಳು, ಚಲನಚಿತ್ರ ನಟರು ಬೀದಿಗೆ ಇಳಿದು ಹೋರಾಟ ಮಾಡುತ್ತಾರೆ. ರಾಜ್ಯ ಸರಕಾರ ಹೆಚ್ಚಿನ ಕಾಳಜಿ ತೋರುತ್ತದೆ. ಆ ಕಾಳಜಿಯನ್ನು ಕೃಷ್ಣಾ ನದಿ ವಿಷಯದಲ್ಲಿ ರಾಜ್ಯ ಸರಕಾರ ತೋರುತ್ತಿಲ್ಲ ಎಂದು ಕೃಷ್ಣಾ ನದಿ ತೀರದ ಜನರು ಸಮಿಶ್ರ ಸರಕಾರದ ವಿರುದ್ದ ಕಿಡಿಕಾಡಿರಿದ್ದಾರೆ. ಅಭಿವೃದ್ದಿಯಲ್ಲಿ ಮಲತಾಯಿ ಧೋರಣೆಯಿಂದಾಗಿ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯ ಕೇಳುವ ಮೊದಲೇ ರಾಜ್ಯ ಸರಕಾರ ಹಾಗೂ ಜನಪ್ರತಿನಿಧಿಗಳು ಕೃಷ್ಣಾ ನದಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲು ಮುಂದಾಗುವರೇ ಕಾಯ್ದು ನೋಡಬೇಕಾಗಿದೆ.
ಕೃಷ್ಣಾ ನದಿ ಬತ್ತಿ ಹೋಗಿರುವುದರಿಂದ ಜನರು ಹಾಗೂ ಜಾನುವಾರುಗಳು ಪ್ರತಿನಿತ್ಯ ಪರದಾಡುವಂತಾಗಿದೆ. ರಾಜ್ಯ ಸರಕಾರ ನೀರು ಹರಿಸಲು ಯಾವುದೆ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಅವರು ಮಹಾರಾಷ್ಟ್ರ ಸರಕಾರ ಹಾಗೂ ಅಲ್ಲಿನ ಅಧಿಕಾರಿಗಳ ಜೊತೆ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡುವ ಬಗ್ಗೆ ಯಾವುದೆ ಮಾತುಕತೆ ನಡೆಸಿಲ್ಲ. ಉತ್ತರಕರ್ನಾಟದ ಜನರ ಬಗ್ಗೆ ಸಿ.ಎಂ ಕುಮಾರಸ್ವಾಮಿ ಅವರಿಗೆ ಯಾವುದೆ ಹಿತಾಸಕ್ತಿ ಇಲ್ಲ ಎನ್ನುವುದು ಇದರಿಂದಾಗಿ ಗೊತ್ತಾಗುತ್ತದೆ.
-ಮಹಾಂತೇಶ ಕವಟಗಿಮಠ,
ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರು.
ಕೃಷ್ಣಾ ನದಿ ನೀರಿಗಾಗಿ ಈ ಭಾಗದ ರೈತರು ಕಳೆದ 5 ದಿನದಿಂದ ಅಹೋರಾತ್ರಿ ಧರಣಿ ಸತ್ಯಾಗೃಹ ಮಾಡುತ್ತಿರುವಾಗ ರಾಜ್ಯ ಸರಕಾರ ಹಾಗೂ ಚಲನಚಿತ್ರ ನಟರು ಕೃಷ್ಣಾ ನದಿಗೆ ನೀರು ಬಿಡುಗಡೆ ಬಗ್ಗೆ ಮಾತನಾಡಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೇವಲ ಮಂಡ್ಯ ಹಾಗೂ ಹಾಸನಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ನೀರಿಲ್ಲದೆ ಉತ್ತರಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಇವರು ಅನ್ನದಾತನ ಕಷ್ಟಕ್ಕೆ ಸ್ಪಂದಿಸದೆ ಮಲತಾಯಿ ಧೊರಣೆ ಅನುಸರಿಸುತ್ತಿದ್ದಾರೆ.
-ಮಹಾದೇವ ಮಡಿವಾಳ,
ಕರ್ನಾಟಕ ರಾಜ್ಯ ರೈತ ಸಂಘದ ಅಥಣಿ ತಾಲೂಕಾಧ್ಯಕ್ಷರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ