ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಏ.23 ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ. ಅವುಗಳಲ್ಲಿ 7 ಮುಂಬೈ ಕರ್ನಾಟಕದಲ್ಲಿವೆ. ಕಳೆದ ಬಾರಿ 7ರಲ್ಲಿ 6 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಚಿಕ್ಕೋಡಿ ಮಾತ್ರ ಸ್ವಲ್ಪದರಲ್ಲಿ ಕೈ ಪಾಲಾಗಿತ್ತು.
ಈ ಬಾರಿ ಈ ಏಳೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಬಂದಿರುವ ರಾಜ್ಯಸಭಾ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಕಾರ, ಮುಂಬೈ ಕರ್ನಾಟಕದ ಏಳೂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ. ಎಲ್ಲಿ ನೋಡಿದರೂ ಮೋದಿ ಅಲೆ ಇದೆ. ಹಾಗಾಗಿ ಅಭ್ಯರ್ಥಿಗಳಿಗಿಂತ ಮೋದಿ ಪ್ರಭಾವ ಹೆಚ್ಚು ಕೆಲಸ ಮಾಡಲಿದೆ.
ಈ 7ರಲ್ಲಿ 4 ಕ್ಷೇತ್ರವಂತೂ ಬಿಜೆಪಿ ಪಾಲಿಗೆ ಸುಲಿದಿಟ್ಟ ಬಾಳೆ ಹಣ್ಣಿನಷ್ಟು ಸುಲಭವಾಗಿವೆ. ಬೆಳಗಾವಿ. ಧಾರವಾಡ, ಉತ್ತರ ಕನ್ನಡ ಹಾಗೂ ಬಿಜಾಪುರದಲ್ಲಿ ಬಿಜೆಪಿಗೆ ಪೈಪೋಟಿಯೇ ಇಲ್ಲ. ಇನ್ನು ಹಾವೇರಿ, ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಸ್ವಲ್ಪ ಪೈಪೋಟಿ ಇದೆ. ಆದರೆ ಬಿಜೆಪಿ ಗೆಲುವು ನಿಶ್ಚಿತ ಎನ್ನುತ್ತಾರೆ ಪ್ರಭಾಕರ ಕೋರೆ.
ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ವರ್ಗದ ಜನರನ್ನು ತಲುಪಿದೆ. ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದೆ. ಹಾಗಾಗಿ ಕಳೆದ ಬಾರಿಗಿಂತ ರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ರಾಷ್ಟ್ರದಲ್ಲಿ ಮೋದಿ ಬಿಟ್ಟರೆ ಪ್ರಧಾನಿಯಾಗುವ ಯೋಗ್ಯತೆ ಯಾರಿಗಿದೆ? ಮಹಾಘಟಬಂಧನ ಬೆಂಗಳೂರಿಗಷ್ಟೇ ಸೀಮಿತವಾಗಿದೆ. ಒಂದೊಂದು ಪಕ್ಷಗಳು ಒಂದೊಂದು ಕಡೆ ಮುಖ ಮಾಡಿವೆ. ರಾಹುಲ್, ಮಮತಾ, ಮಾಯಾವತಿ ಯಾರೂ ಪ್ರಧಾನಿ ಸ್ಥಾನಕ್ಕೆ ಯೋಗ್ಯತೆ ಹೊಂದಿಲ್ಲ. ಹಾಗಾಗಿ ಮೋದಿ ಈ ದೇಶಕ್ಕೆ ಅನಿವಾರ್ಯವಾಗಿದ್ದಾರೆ ಎಂದು ಕೋರೆ ಹೇಳಿದರು.
ಬಡವರಿಗೆ 72 ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಇದು ತಲೆಬುಡವಿಲ್ಲದ ಘೋಷಣೆ. ಇದಕ್ಕೆ ಲೆಕ್ಕಾಚಾರವೇ ಇಲ್ಲ. ಎಲ್ಲಿಂದ ಹಣ ಹೊಂದಿಸುತ್ತಾರೆ ಎನ್ನುವುದೂ ಗೊತ್ತಿಲ್ಲ. ಈಗ ವಾರಣಾಸಿಯಿಂದ ಸ್ಪರ್ಧಿಸುವುದಾಗಿ ಹೇಳುತ್ತಿರುವ ಪ್ರಿಯಾಂಕಾ ಗಾಂಧಿ ಈ ಮೊದಲು ವಾರಣಾಸಿಯನ್ನು ನೋಡಿದವಳೇ ಅಲ್ಲ. ಚುನಾವಣೆ ಬಂದಾಗ ಹಿಂದೂ, ದೇವರು ಎಲ್ಲ ನೆನಪಾಗುತ್ತಾರೆ ಎಂದು ಪ್ರಭಾಕರ ಕೋರೆ ಕಿಚಾಯಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕರ್ನಾಟಕದ ಕಡೆ ಒಲವು ಕಡಿಮೆ. ಕೃಷ್ಣಾ ಮೇಲ್ದಂಡೆ ಸೇರಿದಂತೆ ಇಲ್ಲಿಯ ಯಾವ ಸಮಸ್ಯೆಗೂ ಕಾಂಗ್ರೆಸ್ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯಂತೂ ತಮಗೆ ಉತ್ತರ ಕರ್ನಾಟಕದವರು ಮತ ಹಾಕಿಲ್ಲ. ಹಾಗಾಗಿ ತಮಗೆ ಉತ್ತರ ಕರ್ನಾಟಕ ಸಂಬಂಧವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹಾಗಾಗಿ ಈ ಎರಡೂ ಪಕ್ಷಗಳನ್ನು ಮತದಾರರು ಉತ್ತರ ಕರ್ನಾಟಕದಿಂದ ಓಡಿಸಿದ್ದಾರೆ ಎಂದರು ಕೋರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ