Latest

ಕ್ರೀಡಾ ತರಬೇತಿದಾರರಿಗೆ ನ್ಯಾಯ ಒದಗಿಸಲು ಕ್ರಮ

 

ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಮೂಲಕ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ಮಾಸಿಕ ಸಂಚಿತ ವೇತನ ಆಧಾರದಲ್ಲಿ ಸೇವೆ ಮಾಡುತ್ತಿರುವ ೧೩೬ ತರಬೇತುದಾರರ ಸೇವಾ ಸಕ್ರಮ ಮಾಡಿಕೊಳ್ಳಲಾಗುವ ಪ್ರಕ್ರಿಯೆ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ವಿಧಾನಪರಿಷತ್ತಿನಲ್ಲಿ ಹೇಳಿದರು.
ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಅರುಣ ಶಹಾಪೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕರ್ನಾಟಕ ಕ್ರೀಡಾ ಪ್ರಾಧಿಕಾರದಲ್ಲಿ ೧೨ ಹಿರಿಯ ತರಬೇತುದಾರರು, ೧೦೪ ತರಬೇತುದಾರರು ಹಾಗೂ ೨೦ ಕಿರಿಯ ತರಬೇತುದಾರರು ಸೇರಿ ಒಟ್ಟು ೧೩೬ ತರಬೇತಿದಾರರು ಮಾಸಿಕ ಸಂಚಿತ ವೇತನದ ಆಧಾರದಲ್ಲಿ ಸೇವೆ ಮಾಡುತ್ತಿದ್ದಾರೆ.ಅವರ ಶೈಕ್ಷಣಿಕ,ಕ್ರೀಡಾ ಅರ್ಹತೆ ಹಾಗೂ ಸಾಧನೆ ಆಧರಿಸಿ ೨೬ ಸಾವಿರ, ೩೧ ಸಾವಿರ ,೩೯ ಸಾವಿರ ಹಾಗೂ ೭೦ ಸಾವಿರ ರೂ.ಮಾಸಿಕ ಸಂಚಿತ ವೇತನ ನೀಡಲಾಗುತ್ತಿದೆ.
ಕೆಲವರು ೧೫೦೦ ರಿಂದ ೨೫೦೦ ರೂ.ಗಳ ವೇತನದೊಂದಿಗೆ ೨೦-೨೫ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ತರಬೇತಿದಾರರ ಪ್ರಾಮುಖ್ಯತೆಯ ಅರಿವು ಸ್ವತಃ ತಮಗೆ ಇದೆ.ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ, ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಸದಸ್ಯನೂ ತಾನಾಗಿದ್ದೇನೆ ಎಂದ ಉಪಮುಖ್ಯಮಂತ್ರಿಗಳು.ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ೨೦೧೮-೧೯ ನೇ ಸಾಲಿನಲ್ಲಿ ೨೨೦.೨೩ ಕೋಟಿ ರೂ.ಅನುದಾನ ಒದಗಿಸಲಾಗಿದೆ.ಕರ್ನಾಟಕ ಕ್ರೀಡಾ ಪ್ರಾಧಿಕಾರಕ್ಕೆ ೧೬.೨೫ ಕೋಟಿ ರೂ.ಒದಗಿಸಲಾಗಿದೆ ಎಂದು ವಿವರಿಸಿದರು.
ಸದಸ್ಯರಾದ ಬಸವರಾಜ ಹೊರಟ್ಟಿ,ಹೆಚ್.ಎಂ.ರೇವಣ್ಣ ಚರ್ಚೆಯಲ್ಲಿ ಭಾಗವಹಿಸಿ ಬಿಪಿಇಡಿ,ಎಂಪಿಇಡಿ ,ಎನ್.ಐ.ಎಸ್.ಪದವೀಧರರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ ಕ್ರೀಡಾರಂಗಕ್ಕೆ ಉತ್ತೇಜನ ಸಿಗಲು ಸಾಧ್ಯ ಎಂದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button