
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಆರೋಗ್ಯ ಸಚಿವ ಶ್ರೀರಾಮುಲು, ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಹಾಗೂ ಸರ್ಕಾರಗಳ ಮೇಲೆ ಆರೋಪ ಮಾಡೋದಕ್ಕೂ ಮುನ್ನ, ತಾವು ಕಾಶ್ಮೀರದಿಂದ-ಕನ್ಯಾಕುಮಾರಿಯವರೆಗೂ ಆರೋಪ ಮಾಡಿ ಆರೋಪಿಗಳಾಗಿರುವ ನಿಮ್ಮ ಪಕ್ಷದ ‘ರಾಜ’-‘ಮಹಾರಾಜ’ ರ ಬಗ್ಗೆ ಗಮನ ಹರಿಸುವುದು ಒಳಿತಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಶ್ರೀರಾಮುಲು ನಡುವಿನ ಟ್ವೀಟ್ ವಾರ್ ಮುಂದುವರೆದಿದ್ದು, ಸರಣಿ ಟ್ವೀಟ್ ಮಾಡಿರುವ ಶ್ರೀರಾಮುಲು, ಸಿದ್ದರಾಮಯ್ಯನವರೇ, ನಾಡು ಸಂಕಷ್ಟದಲ್ಲಿದೆ, ಜನರು ಸಮಸ್ಯೆಯಲ್ಲಿದ್ದಾರೆ. ಕೊರೊನಾವನ್ನು ಗೆಲ್ಲಬೇಕಿದೆ. ಇದು ಕೆಲಸ ಮಾಡೋ ಸಮಯ. ನಾಡಿನ ಜನತೆಗೆ ಕೆಲಸ ಮಾಡಿ, ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಕನಿಷ್ಟ ಮಟ್ಟದ ಸಹಕಾರವನ್ನು ಜನತೆಯ ಪರವಾಗಿ ಕೇಳುತ್ತೇನೆ ಎಂದು ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಸಿದ್ದರಾಮಯ್ಯ ಹಾಗೂ ಶ್ರೀರಾಮುಲು ಮಧ್ಯೆ ಟ್ವೀಟ್ ಸಮರ ನಡೆಯುತ್ತಿದ್ದು, ಕೊರೊನಾ ಚಿಕಿತ್ಸಾ ಸಲಕರಣಗಳನ್ನು ಖರೀದುವಲ್ಲೂ ಸರ್ಕಾರ ಭಾರೀ ಭ್ರಷ್ಟಾರ ನಡೆಸಿದೆ ಎಂದು ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.