ಪ್ರಗತಿವಾಹಿನಿ ಸುದ್ದಿ, ಶಿರಸಿ
ಖ್ಯಾತ ಯಕ್ಷಗಾನ ಕಲಾವಿದ ಜಲವಳ್ಳಿ ವೆಂಕಟೇಶರಾವ್ (86) ಮಂಗಳವಾರ ನಿಧನರಾದರು.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೆಲ ದಿನಗಳಿಂದ ಶಿರಸಿಯ ಟಿಎಸ್ಸೆಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಮೃತರ ಸ್ವಗ್ರಾಮ ಜಲವಳ್ಳಿಯಲ್ಲಿ ಬುಧವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರ ವಿದ್ಯಾಧರರಾವ್ ತಿಳಿಸಿದ್ದಾರೆ.
ರಾಜ್ಯೋತ್ಸವ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿದ್ದ ವೆಂಕಟೇಶರಾವ್, ಶನಿ ಪಾತ್ರದ ಮೂಲಕ ಹೆಚ್ಚು ಪ್ರಸಿದ್ದರಾಗಿದ್ದರು.
ಯಕ್ಷರತ್ನ ಬಡಗುತಿಟ್ಟು ಯಕ್ಷಗಾನದ ಮೇರುಕಲಾವಿದ ಅಭಿನವ ಶನೀಶ್ವರ ಖ್ಯಾತಿ ಪಡೆದಿದ್ದರು. ಯಕ್ಷಗಾನದಲ್ಲಿ ಅನೇಕ ಮೇರು ಕಲಾವಿದರೊಂದಿಗೆ ವೇದಿಕೆಯಲ್ಲಿ ಬಣ್ಣ ಹಚ್ಚಿ ರಾಜ್ಯ ರಾಷ್ಟ್ರಮಟ್ಟದ ವಿವಿಧ ವೇದಿಕೆಯಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿ ಯಕ್ಷರಂಗದ ತಮ್ಮ ಅಭಿನಯವನ್ನು ಸಮಾಜಕ್ಕೆ ತೋರಿಸಿದ್ದರು. ಇವರ ಕಲಾ ಸಾಧನೆ ಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ೧೯೩೩ರಲ್ಲಿ ಜನಿಸಿದ ಇವರು ಚಿಕ್ಕ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ್ದರು.
ಯಕ್ಷಗಾನವನ್ನು ಕಲಿಕೆಯನ್ನು ಕೇಳುವುದರಿಂದಲೂ ಕಲಿಯಬಹುದು ಎಂದು ತೋರಿಸಿಕೊಟ್ಟ ಮಹಾನ್ ಕಲಾವಿದ.
ಜಲವಳ್ಳಿ ಎಂಬ ಊರಿನ ಹೆಸರನ್ನು ಕರ್ನಾಟಕದಾದ್ಯಂತ ಚಿರಪರಿಚಿತ ಗೊಳಿಸಿದ ಶ್ರೇಷ್ಠ ವ್ಯಕ್ತಿ ಇವರಾಗಿದ್ದರು. ಮೇರು ಕಲಾವಿದರಾದ ಶೇಣಿ, ಸಾಮಗ , ಕುಂಬ್ಳೆ ಇವರೊಟ್ಟಿಗೆ ಸರಿಸಮಾನರಾಗಿ ವಾಕ್ಪಟುತ್ವ ಮೆರೆದ ವಾಗ್ಮಿ ನೃತ್ಯ ಕಲಿಯಲಾಗದಿದ್ದರೂ ನಾಟ್ಯದ ತಿರುಳರಿತ ಗತ್ತು ಗಾಂಭೀರ್ಯಕ್ಕೆ ಹೆಸರುವಾಸಿಯಾದ ವೆಂಕಟೇಶ್ ಜಲವಳ್ಳಿಯವರನ್ನು ಯಕ್ಷಗಾನ ಕ್ಷೇತ್ರ ಮರೆಯುವಂತಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ