ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
ಜಾಗತಿಕ ಮಟ್ಟದಲ್ಲಿ ಭಾರತಿಯ ಸಂಸ್ಕೃತಿಯನ್ನು ಗೌರವಿಸುವ ವಾತಾವರಣ ಇಂದು ನಿರ್ಮಾಣಗೊಳ್ಳುತ್ತಿದೆ. ಆದರೆ ಭಾರತದಲ್ಲಿ ಹಳ್ಳಿಗಳನ್ನು ಹೊರತುಪಡಿಸಿದರೆ ನಗರ ಪ್ರದೇಶದಲ್ಲಿ ಗ್ರಾಮೀಣ ಜೀವನ ಶೈಲಿ ಮಾಯವಾಗಿ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುತ್ತಿರುವುದು ವಿಷಾದದ ಸಂಗತಿಯಾಗಿದೆ ಎಂದು ಸ್ಥಳೀಯ ಎಮ್.ಇ.ಎಸ್. ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕ ಪ್ರೋ. ಸಂಗಮಮೇಶ ಗುಜಗೊಂಡ ತಿಳಿಸಿದರು.
ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಸಾಂಸ್ಕೃತಿಕ ವೇದಿಕೆಯಿಂದ ಹಮ್ಮಿಕೊಂಡಿದ್ದ ಜನಪದ ಜಾತ್ರೆ ಎಂಬ ಗ್ರಾಮೀಣ ಬದುಕಿನ ಅನಾವರಣ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಭಾರತೀಯ ಸಂಸ್ಕೃತಿಯೆಂಬುದು ಜನರ ಜೀವನ ಶೈಲಿಯ ಒಂದು ಭಾಗವೇ ಹೊರತು ಬೇರೆನು ಅಲ್ಲ. ಈ ಸಂಸ್ಕೃತಿ ಇಂದು ಯುವ ಜನತೆಯಿಂದ ದೂರವಾಗುತ್ತಿದೆ. ಪಾಶ್ಚಿಮಾತ್ಯ ಸಂಸ್ಕೃತಿ, ಜೀವನ ಶೈಲಿಯ ಭಾಗವಾಗುತ್ತಿರುವ ಇವರು ಭಾರತೀಯತೆಯನ್ನು ಮರೆಯುತ್ತಿದ್ದಾರೆ. ಆದರೆ ಈ ಗ್ರಾಮೀಣ ಬದುಕು ಜೀವನಕ್ಕೆ ಉಲ್ಲಾಸವನ್ನು , ಸಂತೋಷವನ್ನು ನೀಡಿ ಪರಿಪೂರ್ಣತೆಯತ್ತ ಕೊಂಡ್ಯೊಯ್ಯುತ್ತದೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಶ್ರೀ ಶ್ರೀಪಾದಭೋಧ ಸ್ವಾಮಿಜಿ ಮಾತನಾಡಿ, ಭಾರತೀಯರು ಇಂದು ನಮ್ಮ ಸನಾತನ ಸಂಸ್ಕ್ರತಿಯ ಭಾಗವಾಗಿದ್ದ ಹಳ್ಳಿ ಜನಪದ ಶೈಲಿಯನ್ನು ನಾವೇ ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಉದ್ಭವವಾಗಿದೆ. ಮುಂದಿನ ಪೀಳಿಗೆಗ ಈ ಸಂಸ್ಕೃತಿಯನ್ನು ತಿಳಿಸುವ ಕಾರ್ಯ ಮಾಡುತ್ತಿರುವ ಮಹಾವಿದ್ಯಾಲಯದ ವಿದ್ಯಾರ್ಥಿಗಳ, ಉಪನ್ಯಾಸಕರ ಕಾರ್ಯ ಅವಿಸ್ಮರಣೀಯವಾದುದು. ಇಂಥ ಕಾರ್ಯಕ್ರಮಗಳು ಜರುಗಿದಾಗಲೇ ಇಂದಿನ ಯುವಕರಿಗೆ ಬೆಳೆ ಬೆಳೆಯುವ, ರಾಶಿ ಮಾಡುವ ವ್ಯವಸ್ಥೆ , ಸುಗ್ಗಿ ಕುಣಿತದ ಹಾಡುಗಳು ಸೋಭಾನೆ ಹಾಡುಗಳು ಮುಂತಾದವುಗಳನ್ನು ಪರಿಚಯಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ: ಆರ್.ಬಿ.ಕೊಕಟನೂರ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ನಾವಿಂದು ನಮ್ಮತನವನ್ನು ಮರೆಯುತ್ತಿದ್ದೇವೆ. ಇದು ನಮ್ಮ ಜೀವನ ಶೈಲಿ ಹಾಗೂ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂದಿನ ಯುವ ಸಮೂಹ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಅನಿವಾರ್ಯತೆಯಲ್ಲಿ ನಾವಿದ್ದೇವೆ. ಇಲ್ಲವಾದಲ್ಲಿ ಇದು ಮುಂದೊಂದು ದಿನ ಸಂಸ್ಕೃತಿಯ ವಿನಾಶಕ್ಕೆ ಕಾರಣವಾಗಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ಸಲಹಾ ಸಮಿತಿಯ ಸದಸ್ಯರಾದ ಚಂದ್ರು ಗಾಣಿಗ, ಸಂತೋಷ ಮುಖಾಶಿ, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಶಿವಲೀಲಾ, ಸಿಬ್ಬಂದಿ ಕಾರ್ಯದರ್ಶಿ ಶಿವಾನಂದ ಚಂಡಕೆ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರವಿ ಗಡದನ್ನವರ ಗಾಯತ್ರಿ ಸಾಳೋಖೆ, ಆಶ್ವಿನಿ ಎಸ್, ಬಸಪ್ಪ ಹೆಬ್ಬಾಳ, ಶಿವಕುಮಾರ, ಸಂಜುಕುಮಾರ, ಶಾನೂರಕುಮಾರ ಕೆಂಪಣ್ಣ ದೊಣವಾಡ, ರವಿ ಮೇಟಗೇರಿ, ಶಿವಾಜಿ ಮುಳಿಕ ಮತ್ತಿತರು ವೇದಿಕೆಯಲ್ಲಿದ್ದರು. ಅಶ್ವಿನಿ ಕಮತೆ ಸ್ವಾಗತಿಸಿದರು. ಮಲ್ಲು ಬಿಸನಕೊಪ್ಪ ವಂದಿಸಿದರು. ಶಿವಕುಮಾರ ನಿರೂಪಿಸಿದರು.
(ಈ ಸುದ್ದಿಯನ್ನು ಎಲ್ಲಾ ಗ್ರುಪ್ ಗಳಿಗೆ, ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ