ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕನ್ನಡ ಚಿತ್ರರಂಗದ ಪ್ರಮುಖರ ಮನೆಯ ಮೇಲೆ ನಡೆದ ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಸಿಕ್ಕಿರುವ 109 ಕೋಟಿ ರೂ. ಆಸ್ತಿಗಳಿಗಳಿಗೆ ದಾಖಲೆ ಇಲ್ಲ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.
ಐಟಿ ಇಲಾಖೆ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಪ್ರಕಾರ ಒಟ್ಟು 109 ಕೋಟಿ ಮೌಲ್ಯದ ಆಸ್ತಿಗೆ ಯಾವುದೇ ದಾಖಲೆ ಇಲ್ಲ. ಈ ಆಘೋಷಿತ ಆಸ್ತಿಗೆ ತೆರಿಗೆ ಪಾವತಿ ಆಗಿಲ್ಲ. ಇದರಲ್ಲಿ 2.85 ಕೋಟಿ ನಗದು ಹಣ ಹಾಗೂ 25.3 ಕೆಜಿ ಬಂಗಾರ ಸೇರಿದೆ.
ಸಂಭಾವನೆಯ ಹೊರತಾಗಿ ಪ್ರಮುಖವಾಗಿ ನಟರ ವ್ಯವಹಾರಗಳ ಮೇಲೆ ಹಾಗೂ ಸಿನಿಮಾಗಳ ಆಡಿಯೋ ಹಕ್ಕು, ಸೆಟೆಲೈಟ್ ರೈಟ್ಸ್, ಥಿಯೇಟರ್ ಕಲೆಕ್ಷನ್ ಮೊದಲಾದವುಗಳಿಗೆ ಸರಿಯಾದ ಲೆಕ್ಕ ಪತ್ರಗಳು ಇಲ್ಲ ಎಂದು ತಿಳಿಸಲಾಗಿದೆ.
ನಟರು ಹಾಗೂ ನಿರ್ಮಾಪಕರ 109 ಕೋಟಿ ಮೌಲ್ಯದ ಆಸ್ತಿಯ ಬಗ್ಗೆ ಮತ್ತೆ ವಿಚಾರಣೆ ನಡೆಯಲಿದೆ ಎಂದಿರುವ ಆದಾಯ ತೆರಿಗೆ ಇಲಾಖೆ ಯಾರ ಬಳಿ ದೊರೆತಿರುವ ಮೌಲ್ಯ ಎಷ್ಟು ಎನ್ನುವ ವಿವರ ಬಹಿರಂಗ ಪಡಿಸಿಲ್ಲ.
ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಸುದೀಪ್, ಯಶ್, ನಿರ್ಮಾಪಕರಾದ ಜಯಣ್ಣ, ವಿಜಯ್ ಕಿರಗಂದೂರು, ರಾಕ್ ಲೈನ್ ವೆಂಕಟೇಶ್ ಹಾಗೂ ಸಿ ಆರ್ ಮನೋಹರ್ ಮನೆ ಮೇಲೆ ಕಳೆದ ಗುರುವಾರ ಐಟಿ ದಾಳಿ ನಡೆದಿತ್ತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ