Latest

ಚಳಿಗಾಲ ಅಧಿವೇಶನದಲ್ಲಿ ಗ್ರಾಪಂಗಳ ಪರ ಧ್ವನಿ -ಕವಟಗಿಮಠ

 

 

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯದಲ್ಲಿರುವ ಗ್ರಾಪಂಗಳು ಕೇವಲ ಸರ್ಕಾರಿ ಕಚೇರಿಗಳಾಗಿವೆಯೇ ವಿನಃ ಗ್ರಾಮೀಣಾಭಿವೃದ್ದಿಯಲ್ಲಿನ ಅವುಗಳ ಪಾತ್ರ ಶೂನ್ಯ. ಗ್ರಾಪಂಗಳು ಒಂದು ಸರ್ಕಾರದಂತೆ ಕಾರ್ಯನಿರ್ವಹಿಸಬೆಕಾದರೆ ಗ್ರಾಪಂಗಳಿಗೆ ಅಧಿಕಾರ ವಿಕೇಂದ್ರೀಕರಣದ ಜೊತೆಗೆ ಪಕ್ಷರಹಿತ ಸರಕಾರ ನಿರ್ಮಾಣವಾಗಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಶತಮಾನೋತ್ಸವ ಕಟ್ಟಡದ ಡಾ.ಹೆಚ್.ಬಿ ರಾಜಶೇಖರ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಹಕ್ಕೊತ್ತಾಯ ಆಂದೋಲನದ ಸಹಭಾಗಿತ್ವದಲ್ಲಿ ಜಿಪಂ, ತಾಪಂ ಹಾಗೂ ಗ್ರಾಪಂಗಳ ಅಧ್ಯಕ್ಷ ಉಪಾಧ್ಯಕ್ಷರಿಗೆ ಆಯೋಜಿಸಿದ್ದ ಗ್ರಾಮ ಸ್ವರಾಜ್ ಚಿಂತನ- ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 1993ರ ಸಂದರ್ಭದಲ್ಲಿ ತಾವು ಗ್ರಾಪಂ ಸದಸ್ಯರಾಗಿದ್ದ ಸಮಯದಲ್ಲಿ ಗ್ರಾಪಂಗಳಲ್ಲಿ ಹಾಜರಾತಿ ಪುಸ್ತಕ ಸಹ ಇರಲ್ಲಿಲ್ಲ. ಇಂದು ಸರ್ಕಾರ ಗ್ರಾಪಂಗಳಿಗೆ ಎಲ್ಲ ಸೌಲಭ್ಯಗಳನ್ನು ನೀಡಿದೆ. ಆದರೆ ಅಧಿಕಾರ ನೀಡಿಲ್ಲ ಎಂದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ರಮೇಶ ಕುಮಾರ ನೇತೃತ್ವದ ಜಂಟಿ ಸದನ ಸಮಿತಿಯು ನೀಡಿದ ವರದಿಯನ್ನು ಸರಕಾರ ಇನ್ನೂ ಅನುಷ್ಠಾನಕ್ಕೆ ತರುವಲ್ಲಿ ಮೀನ ಮೇಷ ಎಣಿಸುತ್ತಿದೆ. ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆ ಅನುದಾನ ಬಳಕೆ ಸೇರಿದಂತೆ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಗ್ರಾಪಂಗಳ ಪರ ಧ್ವನಿ ಎತ್ತಲು ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಸಿ. ಕೊಂಡಯ್ಯ ಮಾತನಾಡಿ, ಗ್ರಾಪಂ ಸದಸ್ಯರು ಪಕ್ಷಾತೀತವಾಗಿ ಆಯ್ಕೆಯಾದವರು. ಗ್ರಾಮಗಳ ಅಭಿವೃದ್ಧಿಯಲ್ಲಿ ಎಲ್ಲ ಸದಸ್ಯರು ಒಟ್ಟಿಗೆ ಕಾರ್ಯನಿರ್ವಹಿಸಬೇಕು. ಗ್ರಾಪಂಗಳ ಅಧಿಕಾರ ವಿಕೇಂದ್ರೀಕರಣಕ್ಕಾಗಿ ರಾಜ್ಯದಲ್ಲಿರುವ 25 ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿರುವ ವಿಧಾನ ಪರಿಷತ್ ಸದಸ್ಯರೆಲ್ಲರು ಪಕ್ಷಾತೀತವಾಗಿ ಒಕ್ಕೂಟ ರಚನೆ ಮಾಡಿಕೊಂಡು ಗ್ರಾಪಂಗಳ ಬಲವರ್ಧನೆ ಶ್ರಮಿಸುತ್ತಿರುವುದಾಗಿ ಹೇಳಿದರು.
ಗ್ರಾಮ ಪಂಚಾಯತ್ ಆಂದೋಲನದ ಮುಖಂಡರಾದ ಕೃಪಾ ಆಳ್ವಾ, ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ ಸೇರಿದಂತೆ ಗ್ರಾಪಂ, ಜಿಪಂ, ತಾಪಂ ಸದಸ್ಯರು ಉಪಸ್ಥಿತರಿದ್ದರು. ಸುರೇಶ ಉಕ್ಕಲಿ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button