ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಧಿವೇಶನಕ್ಕೆ ನಿಯೋಜಿಸಲಾಗಿರುವ ಎಲ್ಲ ಅಧಿಕಾರಿಗಳು ಸೂಕ್ತ ಶಿಷ್ಟಾಚಾರ ಪಾಲನೆ ಜತೆಗೆ ತಮಗೆ ವಹಿಸಲಾಗಿರುವ ಕೆಲಸಗಳಲ್ಲಿ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ನಡೆದ ವಿಧಾನಮಂಡಳ ಅಧಿವೇಶನಕ್ಕೆ ನಿಯೋಜಿಸಲಾಗಿರುವ ಸಂಪರ್ಕಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಇದೇ ವೇಳೆ ಮಾತನಾಡಿದ ಅಧಿವೇಶನದ ವಿಶೇಷ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಅವರು, ಕಡಿಮೆ ಅವಧಿಯಲ್ಲಿ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿಧ ಸಮಿತಿ ರಚನೆ -ಜಿಲ್ಲಾಧಿಕಾರಿ: ವಿಧಾನಮಂಡಳ ಅಧಿವೇಶನಕ್ಕೆ ವಿವಿಧ ರೀತಿಯ ಸಮಿತಿಗಳನ್ನು, ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ದೈನಂದಿನ ಕಚೇರಿಯ ಕೆಲಸಗಳ ಜತೆಗೆ ಅಧಿವೇಶನದ ಸಿದ್ಧತೆ ಮಾಡುವುದು ಸವಾಲಿನ ಕೆಲಸವಾಗಿದೆ. ಅಧಿವೇಶನದ ಸಂದರ್ಭದಲ್ಲಿ ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ಸಂಪರ್ಕಾಧಿಕಾರಿಗಳಾಗಿ ನಿಯೋಜಿಸಿರುವ ಅಧಿಕಾರಿಗಳು ತಮಗೆ ನಿಗದಿಪಡಿಸಿದವರ ಪ್ರವಾಸ ವೇಳಾಪಟ್ಟಿ, ಊಟ-ವಸತಿ, ಸಾರಿಗೆ ಸೇರಿದಂತೆ ಯಾವುದೇ ಅನಾನುಕೂಲ ಆಗದಂತೆ ಶಿಷ್ಟಾಚಾರದಂತೆ ವ್ಯವಸ್ಥೆಯನ್ನು ಕಲ್ಪಿಸಲು ನಿರ್ದೇಶನ ನೀಡಿದರು.
ಅಧಿವೇಶನದ ಕರ್ತವ್ಯಕ್ಕೆ ನಿಯೋಜಿಸಿರುವ ಎಲ್ಲ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ಕೆಲಸ ನಿರ್ವಹಿಸುವ ಮೂಲಕ ಜಿಲ್ಲೆಗೆ ಹೆಸರು ತರುವ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ ಅವರು, ಗಣ್ಯರ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಇಲಾಖೆಯು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.
ರೈತರು ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಲು ಅನುಮತಿ ಕೋರಿವೆ. ಪರಿಸ್ಥಿತಿ ಆಧರಿಸಿ ಅನುಮತಿ ನೀಡಲಾಗುವುದು. ಭದ್ರತೆಗೆ ನಿಯೋಜಿಸಲಾಗುವ ಸುಮಾರು ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಊಟ-ವಸತಿ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್. ಆರ್., ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್, ಅಪರ ಜಿಲ್ಲಾಧಿಕಾರಿ ಡಾ.ಬೂದೆಪ್ಪ ಹೆಚ್.ಬಿ. ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ