ಪ್ರಗತಿವಾಹಿನಿ ಸುದ್ದಿ, ತೆಲಸಂಗ
ಬಿಕ್ಷೆ ಬೇಡುವುದನ್ನು ಬಿಟ್ಟು ಭವಿಷ್ಯ ರೂಪಿಸಿಕೊಳ್ಳಿ, ಇನ್ನೊಬ್ಬರ ಆಶ್ರಯಕ್ಕಾಗಿ ಕಾಯಬೇಡಿ, ಅಜ್ಞಾನ ಮೌಢ್ಯತೆ, ಬಡತನ ನಿಮ್ಮ ಕಾಲಕ್ಕೆ ಮುಕ್ತಾಯವಾಗಿ ನಿಮ್ಮ ಮಕ್ಕಳಿಗೆ ಹೊಸ ಜೀವನ ಕಲ್ಪಿಸಿರಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಸೋಮವಾರ ಬೆಳಗ್ಗೆ ಗ್ರಾಮದ ಹಿರೇಮಠದ ಉತ್ತರಾಧಿಕಾರಿ ವೀರೇಶ್ವರ ದೇವರುಗಳ ಜನ್ಮದಿನದ ನಿಮಿತ್ತ ಗ್ರಾಮದ ದಲಿತ ಓಣಿಯಲ್ಲಿಯ ಗೈರಾಣ ಜಾಗದ ಗುಡಿಸಲಲ್ಲಿ ಹಲವು ವರ್ಷದಿಂದ ವಾಸಿಸುತ್ತಿರುವ ದುರಗಮುರಗೇರ ಮಕ್ಕಳಿಗೆ ಉಚಿತ ಬುಕ್ ನೀಡಿ ಮಾತನಾಡಿದರು.
ಸ್ಲೇಟ್ ಮೇಲೆ ಅಕ್ಷರ ಹೇಳಿಕೊಡುವ ಮೂಲಕ ಮಕ್ಕಳನ್ನು ಶಾಲೆಗೆ ಕಳಿಸಿ ವಿದ್ಯಾವಂತರನ್ನಾಗಿ ಮಾಡಿ ಅನ್ನುವ ವಿಶಿಷ್ಟ ಸಂದೇಶದೊಂದಿಗೆ ಆಚರಿಸಲ್ಪಟ್ಟ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಪ್ರತಿಯೊಬ್ಬರ ಜೀವನಕ್ಕೆ ಶಿಕ್ಷಣ ಇಂದಿನ ದಿನದಲ್ಲಿ ಅತ್ಯವಶ್ಯವಾಗಿದೆ. ಇಂತಹ ಮುಂದುವರೆದ ದಿನದಲ್ಲಿ ನಿತ್ಯ ಇಲ್ಲಿಯ ಮಕ್ಕಳು ಚಿಂದಿ ಆಯುವುದು, ಬಿಕ್ಷೆ ಬೇಡುವುದನ್ನು ನೋಡಿ ನಮಗೆ ಬಹಳಷ್ಟು ನೋವುಂಟುಮಾಡಿದೆ. ನಿಮ್ಮ ಮಕ್ಕಳ ಶಿಕ್ಷಣಕ್ಕೆ ತಗಲುವ ಖರ್ಚಿನ ಸಂಪೂರ್ಣ ಹೊಣೆಗಾರಿಕೆ ನಮ್ಮ ಮೇಲಿರಲಿ ಎಂದರು.
ಭವ್ಯತೆಯ ಬೆಳಕು ನಿಮ್ಮ ಭವಿಷ್ಯದಲ್ಲಿ ಮೂಡಲಿ ಎಂಬುದೆ ನಮ್ಮ ಆಶಯವಾಗಿದೆ. ಒಬ್ಬೊಬ್ಬರೂ ಎಂಟತ್ತು ಮಕ್ಕಳನ್ನು ಹೆತ್ತು ಜೀವನ ಸಾಗಿಸುತ್ತೀದ್ದೀರಿ. ಬಿಕ್ಷೆ ಬೇಡಿ ಮಳೆ ಗಾಳಿ ಚಳಿಯಲ್ಲಿ ಕಷ್ಟದ ದಿನಗಳನ್ನು ಕಳೆಯುತ್ತಾ ಚಿಮಣಿ ಬೆಳಕಿನಲ್ಲಿ ಇನ್ನೂ ಅದೆಷ್ಟುದಿನ ಬಾಳುವಿರಿ. ಇಂತಹ ಬದುಕು ನಿಮ್ಮ ತಲೆಮಾರಿಗೆ ಕೊನೆಯಾಗಲಿ. ಸರಕಾರ ನಿಮ್ಮಂತವರಿಗೋಸ್ಕರ ಹತ್ತು ಹಲವು ಯೋಜನೆಯನ್ನು ಜಾರಿಗೆ ತಂದಿದೆ. ಹಾಗಾಗಿ ಸರ್ಕಾರದ ಸೌಲತ್ತು ಪಡೆದುಕೊಂಡು ಆರ್ಥಿಕವಾಗಿ ಸಾಮಾಜಿಕವಾಗಿ ಮೇಲೆ ಬನ್ನಿ. ಇದು ನಿಮ್ಮ ಹಕ್ಕಾಗಿದ್ದು, ದುಡಿದು ತಿನ್ನುವ ಕಾಯಕ ಪ್ರಾರಂಭಿಸಿರಿ. ಇಲ್ಲಿ ಯಾರೂ ಕೀಳಲ್ಲ. ಕೀಳಾಗಿ ಯೋಚನೆ ಮಾಡುವವರೇ ಕೀಳುಜನ. ನಿಮ್ಮೊಂದಿಗೆ ನಾವಿದ್ದೇವೆ. ನಾಳೆಯಿಂದ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ತಿಳಿ ಹೇಳಿದರು.
ಜ.ಜಾ.ಗ್ರಾ.ಸೇವಾ ಸಂಘದ ಅಧ್ಯಕ್ಷ ರಾಜು ಹೊನಕಾಂಬಳೆ, ದಲಿತ ಮುಖಂಡ ರಾಜು ಪರ್ನಾಕರ, ಗ್ರಾಪಂ ಸದಸ್ಯ ಸಿದ್ದಲಿಂಗ ಮಾದರ, ಶಂಕರ ಡೆಂಗಿ, ಸುರೆಶ ಖೊಳಂಬಿ, ಸಂಗಮೆಶ ಕುಮಠಳ್ಳಿ, ರಾಜು ಸಾಗರ, ಸಾಗರ ಬಿಜ್ಜರಗಿ, ಇಬ್ರಾಹಿಮ್ ನಧಾಫ್ ಸೇರಿದಂತೆ ಅನೇಕರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ