ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಸಂಜೆ ೬ ಗಂಟೆಯವರೆಗಿನ ಪ್ರಾಥಮಿಕ ಮಾಹಿತಿ ಪ್ರಕಾರ ಚಿಕ್ಕೋಡಿ ಕ್ಷೇತ್ರದಲ್ಲಿ ಶೇ.೭೪.೦೯ಮತ್ತು ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಶೇ.೬೬.೫೯ ರಷ್ಟು ಮತದಾನವಾಗಿದೆ.
ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ೦೧- ಚಿಕ್ಕೋಡಿ, ೦೨-ಬೆಳಗಾವಿ ಹಾಗೂ ೧೨-ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಗಳಿದ್ದು, ಒಟ್ಟು ೩೭,೭೩,೯೯೦ ಮತದಾರರಿದ್ದಾರೆ.
ಚಿಕ್ಕೋಡಿ-೧೬,೦೪,೭೮೮; ಬೆಳಗಾವಿ-೧೭,೭೧,೮೨೯ ಹಾಗೂ ಕಿತ್ತೂರು ಮತ್ತು ಖಾನಾಪುರ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಜಿಲ್ಲೆಯ ೩,೯೭,೩೭೩ ಮತದಾರರು ಇದ್ದಾರೆ.
ಜಿಲ್ಲೆಯ ಒಟ್ಟು ೪೪೩೪ ಮತಗಟ್ಟೆಗಳಲ್ಲಿ ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಿತು. ಚಿಕ್ಕೋಡಿ ಕ್ಷೇತ್ರದಲ್ಲಿ ೧೧ ಅಭ್ಯರ್ಥಿಗಳು ಹಾಗೂ ಬೆಳಗಾವಿ ಕ್ಷೇತ್ರದಲ್ಲಿ ೫೭ ಅಭ್ಯರ್ಥಿಗಳು ಕಣದಲ್ಲಿದ್ದರು.
೨೩ ರಂದು ಮತದಾನ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿವಿಧ ತಾಂತ್ರಿಕ ಕಾರಣಗಳಿಂದಾಗಿ ೫೨ ಬ್ಯಾಲೇಟ್ ಯುನಿಟ್, ೧೩ ಕಂಟ್ರೋಲ್ ಯುನಿಟ್ ಹಾಗೂ ೭೧ ವಿವಿಪ್ಯಾಟ್‌ಗಳನ್ನು ಬದಲಾಯಿಸಲಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಚಿಕ್ಕೋಡಿ ಲೋಕಸಭಾ ಕ್ಷೇತ್ರ:
ಚಿಕ್ಕೋಡಿ ಮತಕ್ಷೇತ್ರದ ಒಟ್ಟು ೧೮೮೫ ಮತ ಕೇಂದ್ರಗಳಲ್ಲಿ ಬೆಳಿಗ್ಗೆ ೭ ಗಂಟೆಯಿಂದಲೇ ಬಿರುಸಿನ ಮತದಾನ ನಡೆಯಿತು. ಬೆಳಿಗ್ಗೆ ೯ ಗಂಟೆಯವರೆಗೆ ಶೇ.೮.೭೬; ಬೆಳಿಗ್ಗೆ ೧೧ ಗಂಟೆಗೆ ಶೇ.೨೪.೫೬ ಹಾಗೂ ಮಧ್ಯಾಹ್ನ ೧ ಗಂಟೆಯ ವೇಳೆಗೆ ಒಟ್ಟಾರೆ ಶೇ.೪೧.೦೫ ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ ೩ಕ್ಕೆ ಮತದಾನ ಪ್ರಮಾಣ ಶೇ. ೫೪.೫೪ ಕ್ಕೆ ತಲುಪಿತ್ತು. ಬೆಳಿಗ್ಗೆಯಿಂದಲೇ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಸಂಜೆ ೫ ಗಂಟೆಯವರೆಗೆ ಶೇ.೬೮.೧೫ ಮತದಾನವಾಗಿತ್ತು. ಮತದಾನದ ಮುಕ್ತಾಯದವರೆಗೆ ಒಟ್ಟಾರೆ ಶೇ. ೭೪.೦೯ ಮತದಾನ ದಾಖಲಾಗಿದೆ.
ಬೆಳಗಾವಿ ಲೋಕಸಭಾ ಕ್ಷೇತ್ರ:
ಬೆಳಗಾವಿ ಮತಕ್ಷೇತ್ರದ ಒಟ್ಟು ೨೦೬೪ ಮತ ಕೇಂದ್ರಗಳಲ್ಲಿ ಬೆಳಿಗ್ಗೆ ೭ ಗಂಟೆಯಿಂದ ನಿಧಾನತಗತಿಯಲ್ಲಿ ಮತದಾನವ ಆರಂಭಗೊಂಡಿತು.
ಬೆಳಿಗ್ಗೆ ೯ ಗಂಟೆಯವರೆಗೆ ಶೇ.೭.೦೪; ಬೆಳಿಗ್ಗೆ ೧೧ ಗಂಟೆಗೆ ಶೇ.೧೯.೯೯ ಹಾಗೂ ಮಧ್ಯಾಹ್ನ ೧ ಗಂಟೆಯ ವೇಳೆಗೆ ಒಟ್ಟಾರೆ ಶೇ.೩೫.೧೨ ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ ೩ಕ್ಕೆ ಮತದಾನ ಪ್ರಮಾಣ ಶೇ ೪೮.೬೯ ರಷ್ಟು ದಾಖಲಾಗಿತ್ತು. ಅದೇ ರೀತಿ ಸಂಜೆ ೫ ಗಂಟೆಯವರೆಗೆ ಶೇ.೫೮.೭೨ ರಷ್ಟು ಮತಗಳು ಚಲಾವಣೆಯಾಗಿದ್ದವು. ಮತದಾನದ ಕೊನೆಗೆ ಒಟ್ಟಾರೆ ಶೇ೬೬.೫೯ ರಷ್ಟು ಮತದಾನ ನಡೆಯಿತು.
ಸಖಿ ಮತಗಟ್ಟೆ; ಮತದಾರಸ್ನೇಹಿ ವಾತಾವರಣ:
ಮದುವೆ ಮಂಟಪದಂತೆ ಶೃಂಗಾರಗೊಂಡಿದ್ದ ಸಖಿ ಮತಗಟ್ಟೆಗಳು ಮತದಾರರ ಮೆಚ್ಚುಗೆ ಗಳಿಸಿದವು.
ಚಿಕ್ಕೋಡಿ ೮, ಬೆಳಗಾವಿ ೮ ಹಾಗೂ ಉತ್ತರ ಕನ್ನಡ ೨ ಸೇರಿದಂತೆ ಜಿಲ್ಲೆಯ ಮೂರೂ ಲೋಕಸಭಾ ವ್ಯಾಪ್ತಿಯಲ್ಲಿ ಒಟ್ಟು ೧೮ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿಯಿಂದಲೇ ನಿರ್ವಹಿಸಲ್ಪಡುವ ಸಖಿ ಮತದಾನ ಕೇಂದ್ರಗಳಲ್ಲಿನ ಮತದಾರಸ್ನೇಹಿ ವಾತಾವರಣ ಹಾಗೂ ಮೂಲಸೌಕರ್ಯಗಳು ಎಲ್ಲರ ಗಮನಸೆಳೆದವು. ಸಂಕೇಶ್ವರದ ಟಿಎಂಸಿ ಸಭಾಭವನದ ಸ್ಥಾಪಿಸಲಾಗಿದ್ದ ಸಖಿ ಮತಗಟ್ಟೆ ಸಂಖ್ಯೆ-೬೦ ಅನ್ನು ತಳೀರು-ತೋರಣಗಳಿಂದ ಅಲಂಕೃತಗೊಳಿಸಲಾಗಿತ್ತು.
ಮತಗಟ್ಟೆಯ ಪ್ರವೇಶದ್ವಾರದಲ್ಲಿ ಬಣ್ಣಬಣ್ಣದ ಬಲೂನ್‌ಗಳನ್ನು ಕಟ್ಟಿ ಮತದಾರರು ನಡೆದುಕೊಂಡು ಹೋಗುವ ದಾರಿಯುದ್ದಕ್ಕೂ ಹಸಿರು ಬಣ್ಣದ ಚಾಪೆಯ ಹಾಸಲಾಗಿತ್ತು. ಮತದಾನ ಕೇಂದ್ರದಲ್ಲೂ ಆಹ್ಲಾದಕರ ವಾತಾವರಣ ಒದಗಿಸಲಾಗಿತ್ತು.
ಮತಗಟ್ಟೆಯ ಬಳಿ ಕುಡಿಯುವ ನೀರು, ಗಾಲಿ ಕುರ್ಚಿಗಳು, ಮನಸ್ಸಿಗೆ ಮುದ ನೀಡುವ ಚಿತ್ರಪಟಗಳು ಮತ್ತು ಅಭ್ಯರ್ಥಿಗಳ ವಿವರ ಮತ್ತಿತರ ಅವಶ್ಯಕ ಮಾಹಿತಿ ಫಲಕಗಳನ್ನು ಹಾಕಲಾಗಿತ್ತು.
ಬಿಸಿಲಿನ ಬೇಗೆ ಹೆಚ್ಚಾಗಿರುವ ಕಾರಣ ಸಖಿ ಮತಗಟ್ಟೆಗಳಲ್ಲಿ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತಲ್ಲದೇ ವೈದ್ಯಾಧಿಕಾರಿಯೊಬ್ಬರ ನೇತೃತ್ವದ ನಾಲ್ಕು ಜನ ವೈದ್ಯಕೀಯ ಸಿಬ್ಬಂದಿಯ ತಂಡವನ್ನು ಕೂಡ ಅಲ್ಲಿ ನಿಯೋಜಿಸಲಾಗಿತ್ತು. ಓ.ಆರ್.ಎಸ್. ಪೌಡರ್ ಹಾಗೂ ಪ್ರಥಮ ಚಿಕಿತ್ಸೆಗೆ ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಈ ಮತಗಟ್ಟೆಯಲ್ಲಿ ಇಡಲಾಗಿತ್ತು.
ರಕ್ತದದೊತ್ತಡ ಪರೀಕ್ಷೆ, ರಕ್ತದಲ್ಲಿ ಸಕ್ಕರೆ ಪ್ರಮಾಣ(ಶುಗರ್) ತಪಾಸಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದರಿಂದ ಅನೇಕ ಜನರು ಮತ ಚಲಾಯಿಸಿದ ಬಳಿಕ ಬಿ.ಪಿ., ಶುಗರ್ ತಪಾಸಣೆಯನ್ನೂ ಮಾಡಿಸಿಕೊಳ್ಳುತ್ತಿದ್ದ ದೃಶ್ಯವು ಮಾಧ್ಯಮ ತಂಡ ಭೇಟಿ ನೀಡಿದಾಗ ಕಂಡುಬಂದಿತು.
ಮತ ಚಲಾವಣೆಗೆ ಪ್ರೋತ್ಸಾಹಿಸಲು ಸಖಿ ಮತಗಟ್ಟೆಗಳ ಸ್ಥಾಪನೆ, ದಿವ್ಯಾಂಗರಿಗೆ ಗಾಲಿಕುರ್ಚಿಗಳನ್ನು ಒದಗಿಸುವುದು; ಹಿರಿಯ ನಾಗರಿಕರ ನೆರವಿಗೆ ಸ್ವಯಂಸೇವಕರ ನಿಯೋಜನೆ; ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಬಗೆಯ ಮೂಲಸೌಕರ್ಯಗಳನ್ನು ಕಲ್ಪಿಸಿ ಮತದಾರಸ್ನೇಹಿ ವಾತಾವರಣವನ್ನು ಒದಗಿಸಲು ಚುನಾವಣಾ ಆಯೋಗ ಕೈಗೊಂಡ ಕ್ರಮಗಳ ಬಗ್ಗೆ ಮತದಾರರು ಮುಕ್ತಕಂಠದಿಂದ ಶ್ಲಾಘಿಸಿದರು.
ಗಾಲಿಕುರ್ಚಿ ಆಸರೆ; ಹಿರಿಯರ ಮಂದಹಾಸ:
ಮತಗಟ್ಟೆಗಳಿಗೆ ಆಗಮಿಸುವ ದಿವ್ಯಾಂಗರು ಹಾಗೂ ಹಿರಿಯರನ್ನು ಕರೆತರಲು ಮತಗಟ್ಟೆಗಳಲ್ಲಿ ಗಾಲಿಕುರ್ಚಿ ವ್ಯವಸ್ಥೆಯನ್ನು ಮಾಡಲಾಗಿತ್ತು.
ಚಿಕ್ಕೋಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಹುಕ್ಕೇರಿ ತಾಲ್ಲೂಕಿನ ಗುಡಸ ಗ್ರಾಮದ ಪ್ರಾಥಮಿಕ ಶಾಲೆಯ ನಾಲ್ಕು ಮತಗಟ್ಟೆಗಳಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಕೌಟ್ಸ್ ಮತ್ತು ಗೈಡ್ಸ್‌ನ ಕೆಡೆಟ್‌ಗಳು ಹಿರಿಯರು ಅಥವಾ ದಿವ್ಯಾಂಗರು ಬಂದಾಗ ಗಾಲಿಕುರ್ಚಿಗಳನ್ನು ತೆಗೆದುಕೊಂಡು ಹೋಗಿ ಅವರನ್ನು ಮತಗಟ್ಟೆಗೆ ಕರೆತರುತ್ತಿದ್ದ ದೃಶ್ಯವು ಸುವ್ಯವಸ್ಥೆಗೆ ಸಾಕ್ಷಿಯಾಗಿತ್ತು.
ಹೀಗೆ ಹಿರಿಯರು, ದಿವ್ಯಾಂಗರ ಕೈಹಿಡಿದು ಕರೆತಂದ ಕೆಡೆಟ್‌ಗಳು ಮತದಾನಕ್ಕೆ ಸಹಕರಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ತಾವೂ ಸಂಭ್ರಮಿಸಿದರು.
ಶತಾಯಗತಾಯ ಮತದಾನ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಂಕಲ್ಪ ಮಾಡಿದ್ದ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯ್ತಿ ಮುಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಹಾಗೂ ಅವರ ತಂಡವು ಬಹಳ ಮುತುವರ್ಜಿ ವಹಿಸಿ ಶತಾಯುಷಿ ಮತದಾರರಿಗೆ ಮತದಾನದ ಮಮತೆಯ ಕರೆಯೋಲೆ ಕಳುಹಿಸಿದ್ದರು.
ಮೂರ್ನಾಲ್ಕು ತಿಂಗಳುಗಳಿಂದ ನಿರಂತರವಾಗಿ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಚುನಾವಣಾ ಪ್ರಕ್ರಿಯೆ ಮತ್ತು ಮತದಾನದ ಕುರಿತು ಅರಿವು ಮೂಡಿಸುವಲ್ಲಿ ಸ್ವೀಪ್ ತಂಡವು ಯಶಸ್ವಿಯಾಗಿತ್ತು.
ಬೆಳಿಗ್ಗೆ ೭ ಗಂಟೆಯಿಂದ ಸಂಜೆ ೫ ಗಂಟೆಯವರೆಗಿನ ಮತದಾನದ ವಿವರ:
ಲೋಕಸಭಾ ಮತಕ್ಷೇತ್ರ ವಿಧಾನಸಭಾ ಮತಕ್ಷೇತ್ರ ಒಟ್ಟು ಮತದಾರರು ಮತದಾನ ಪ್ರಮಾಣ % (೯ ಗಂಟೆ) ಮತದಾನ ಪ್ರಮಾಣ % (೧೧ ಗಂಟೆ) ಮತದಾನ ಪ್ರಮಾಣ % (೧ ಗಂಟೆ) ಮತದಾನ ಪ್ರಮಾಣ % (೩ ಗಂಟೆ) ಮತದಾನ ಪ್ರಮಾಣ % (೫ ಗಂಟೆ)
೧. ಚಿಕ್ಕೋಡಿ ೧. ನಿಪ್ಪಾಣಿ ೨,೧೬,೪೯೩ ೮.೯೨% ೨೩.೪೫% ೪೫.೦೩% ೫೮.೬೧% ೬೭.೭೬%
೨. ಚಿಕ್ಕೋಡಿ-ಸದಲಗಾ ೨,೧೬,೦೮೭ ೧೦.೬೩% ೨೬.೬೦% ೪೫.೪೫% ೬೦.೬೬% ೭೫.೪೧%
೩. ಅಥಣಿ ೨,೧೭,೮೫೧ ೯.೮೨% ೨೭.೧೨% ೪೩.೧೦% ೫೪.೨೩% ೬೮.೧೦%
೪. ಕಾಗವಾಡ ೧,೮೫,೪೪೩ ೮.೬೭% ೨೬.೨೦% ೪೧.೪೨% ೫೪.೩೩% ೬೮.೭೯%
೫. ಕುಡಚಿ ೧,೮೨,೦೬೩ ೭.೬೪% ೧೯.೨೭% ೩೩.೨೫% ೫೦.೮೫% ೬೩.೮೩%
೬. ರಾಯಬಾಗ ೧,೯೯,೨೪೭ ೧೦.೧೭% ೨೫.೬೯% ೪೧.೩೨% ೫೪.೫೦% ೬೫.೪೬%
೭. ಹುಕ್ಕೇರಿ ೧,೯೭,೧೨೫ ೫.೨೯% ೨೩.೪೮% ೩೫.೪೯% ೫೧.೮೯% ೬೨.೯೨%
೧೦. ಯಮಕನಮರಡಿ ೧,೯೦,೧೭೪ ೮.೪೯% ೨೩.೯೫% ೪೧.೭೫% ೫೮.೦೨% ೭೨.೧೩%
ಒಟ್ಟು – ೧೬,೦೪,೪೮೩ ೮.೭೬% ೨೪.೫೬% ೪೧.೦೫% ೫೫.೫೧% ೬೮.೧೫%
೨. ಬೆಳಗಾವಿ ೮. ಅರಬಾವಿ ೨,೩೩,೦೩೮ ೬.೭೪% ೧೭.೧೯% ೩೧.೯೭% ೪೮.೨೪% ೬೦.೦೩%
೯. ಗೋಕಾಕ ೨,೪೨,೧೨೪ ೬.೬೩% ೧೯.೮೦% ೩೫.೮೫% ೪೯.೧೭% ೫೮.೦೪%
೧೧. ಬೆಳಗಾವಿ-ಉತ್ತರ ೨,೩೪,೪೮೪ ೯.೯೧% ೨೪.೧೫% ೩೮.೪೬% ೪೮.೬೮% ೫೬.೯೭%
೧೨. ಬೆಳಗಾವಿ-ದಕ್ಷಿಣ ೨,೩೭,೩೩೯ ೧೦.೨೦% ೨೩.೯೪% ೩೯.೫೭% ೪೬.೯೩% ೫೫.೩೩%
೧೩. ಬೆಳಗಾವಿ-ಗ್ರಾಮೀಣ ೨,೪೧,೧೧೫ ೫.೫೯% ೧೭.೪೯% ೩೦.೬೪% ೪೫.೭೦% ೬೦.೭೯%
೧೬. ಬೈಲಹೊಂಗಲ ೧,೮೬,೮೬೭ ೭.೨೮% ೨೦.೬೫% ೩೬.೧೦% ೫೦.೮೮% ೬೩.೧೨%
೧೭. ಸವದತ್ತಿ ಯಲ್ಲಮ್ಮ ೧,೯೪,೦೮೧ ೪.೩೧% ೧೮.೨೫% ೩೪.೫೨% ೫೨.೨೧% ೬೨.೦೧%
೧೮. ರಾಮದುರ್ಗ ೨,೦೨,೭೮೧ ೪.೯೯% ೧೮.೦೨% ೩೩.೭೫% ೪೮.೫೯% ೫೪.೩೪%
ಒಟ್ಟು- ೧೭,೭೧,೮೨೯ ೭.೦೪% ೧೯.೯೯% ೩೫.೧೨% ೪೮.೬೬% ೫೮.೭೨%
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ