Latest

ಚೌಕಿದಾರ್ ಚೋರ್ ಹೈ ಹೇಳಿಕೆಗೆ ಸುಪ್ರಿಂ ಸಪೋರ್ಟ್ ಪಡೆಯಲೆತ್ನಿಸಿದ ರಾಹುಲ್ ಗೆ ನೋಟೀಸ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ರಫೇಲ್ ಹಗರಣ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಚೌಕಿದಾರ್ ಚೋರ್ ಹೈ ಎನ್ನುವ ತಮ್ಮ ಹೇಳಿಕೆ ಸಮರ್ಥಿಸಿಕೊಳ್ಳಲು ಸುಪ್ರಿಂ ಕೋರ್ಟ್ ಸಫೋರ್ಟ್ ಪಡೆಯಲು ಯತ್ನಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೋಟೀಸ್ ನೀಡಲಾಗಿದೆ.

ಸರ್ವೋಚ್ಛ ನ್ಯಾಯಾಲಯ ನೋಟೀಸ್ ಜಾರಿ ಮಾಡಿದ್ದು, ಇದೇ 22ರೊಳಗೆ ವಿವರಣೆ ನೀಡುವಂತೆ ಸೂಚಿಸಿದೆ. ತಾವು ಮಾಡುತ್ತಿರುವ ಆರೋಪವನ್ನು ಸುಪ್ರಿಂ ಕೋರ್ಟ್ ಕೂಡ ಒಪ್ಪಿದೆ ಎನ್ನುವ ರೀತಿಯಲ್ಲಿ ರಾಹುಲ್ ಮಾತನಾಡಿದ್ದರು.

ಏಪ್ರಿಲ್ 10ರಂದು ರಫೇಲ್ ಒಪ್ಪಂದದ ಕುರಿತು ತೀರ್ಪು ಮರುಪರಿಶೀಲನೆಗೆ ಕೋರಿದ್ದ ಅರ್ಜಿಗಳ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿತ್ತು. ಈ ಸಂದರ್ಭದಲ್ಲಿ ಅದು ಕೇಂದ್ರ ಸರ್ಕಾರದ ಆಕ್ಷೇಪವನ್ನು ವಜಾಗೊಳಿಸಿತ್ತು. ಇದನ್ನು ಮೋದಿ ವಿರುದ್ಧ ವಾಗ್ದಾಳಿಗೆ ಬಳಸಿಕೊಂಡಿದ್ದ ರಾಹುಲ್ ಗಾಂಧಿ, ‘ಚೌಕಿದಾರ್ ಚೋರ್ ಹೈ’ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂದು ಹೇಳಿಕೆ ನೀಡಿದ್ದರು.

“ರಫೇಲ್ ವಿವಾದದ ಕುರಿತ ದಾಖಲೆಗಳನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಇಂದು ನೀಡಿದ ತೀರ್ಪಿನಿಂದ ಚೌಕಿದಾರ ಚೋರ ಎಂಬುದು ಸಾಬೀತಾಗಿದೆ. ಇದರಿಂದಾಗಿ ಮತ್ತಷ್ಟು ಭ್ರಷ್ಟಾಚಾರದ ಪ್ರಕರಣಗಳು ಹೊರಬರಲಿವೆ. ಇದು ನ್ಯಾಯದ ಗೆಲುವು. ಸುಪ್ರೀಂ ಕೋರ್ಟ್ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಇದು ಅತ್ಯಂತ ಪ್ರಮುಖ ದಿನ. ನೀವು ಭ್ರಷ್ಟಾಚಾರ ಮಾಡಿದ್ದೀರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಾನು ಈಗಲೂ ಮೋದಿಯವರಿಗೆ ಸವಾಲೆಸೆಯುತ್ತೇನೆ. ನನ್ನೊಂದಿಗೆ ಚರ್ಚೆಗೆ ಬನ್ನಿ. ಈ ದೇಶದ ಜನರಿಗೆ ರಫೇಲ್ ಬಗ್ಗೆ ತಿಳಿಯಬೇಕಿದೆ. ಭ್ರಷ್ಟಾಚಾರದ ಬಗ್ಗೆ ತಿಳಿಯಬೇಕಿದೆ. ಅಪನಗದೀಕರಣದ ಬಗ್ಗೆ ತಿಳಿಯಬೇಕಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದರ ವಿರುದ್ಧ ಬಿಜೆಪಿ ಸಂಸದೆ ಮಿನಾಕ್ಷಿ ಲೇಖಿ ಸುಪ್ರೀಂಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿ , ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್ ತೀರ್ಪನ್ನು ಉದ್ದೇಶಪೂರ್ವಕವಾಗಿ ತಿರುಚಿದ್ದಾರೆ ಎಂದು ಆರೋಪಿಸಿದ್ದರು.

ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದ ನ್ಯಾಯಪೀಠ, ಸುಪ್ರೀಂಕೋರ್ಟ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಯಾವುದೇ ಹೇಳಿಕೆಯನ್ನು ಪ್ರಸ್ತಾಪಿಸಿಲ್ಲ ಎಂದು ಹೇಳಿತು. ರಾಹುಲ್ ಆರೋಪ ಮಾಡಿರುವ ವಿಚಾರದ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ವಿಚಾರಣೆ ನಡೆಸುತ್ತಿಲ್ಲ. ಅದು ರಫೇಲ್ ಪ್ರಕರಣದ ದಾಖಲೆಗಳ ಬಗ್ಗೆ ಮಾತ್ರ ವಿಚಾರಣೆ ನಡೆಸಿದೆ. ಆದರೆ, ರಾಹುಲ್ ಗಾಂಧಿ ಅವರು ಸಾರ್ವಜನಿಕವಾಗಿ ರಫೇಲ್ ತೀರ್ಪಿನ ಕುರಿತು ಸುಪ್ರೀಂಕೋರ್ಟ್ ಅನ್ನು ಉಲ್ಲೇಖಿಸಿರುವುದು ಸರಿಯಲ್ಲ ಎಂದು ಕಿಡಿಕಾರಿತು.

ಬಳಿಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ನೋಟಿಸ್ ಜಾರಿ ಮಾಡಿದ ಕೋರ್ಟ್, ಮುಂದಿನ ಸೋಮವಾರ (ಏಪ್ರಿಲ್ 22) ವೇಳೆಗೆ ರಾಹುಲ್ ಗಾಂಧಿ ಅವರು ಸುಪ್ರೀಂಕೋರ್ಟ್ ಹೆಸರು ಉಲ್ಲೇಖ ಮಾಡಿರುವುದಕ್ಕೆ ವಿವರಣೆ ನೀಡಬೇಕು ಎಂದು ಸೂಚಿಸಿ, ಮುಂದಿನ ವಿಚಾರಣೆಯನ್ನು ಅಂದಿಗೆ ನಿಗದಿಪಡಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button