ಪ್ರಗತಿವಾಹಿನಿ ಸುದ್ದಿ, ಬೆಂಗಳೂರು :
ಭಾರತೀಯ ಪೈಲೆಟ್ ಪಾಕಿಸ್ತಾನದ ವಶಕ್ಕೆ ಸಿಕ್ಕಿಬಿದ್ದಿದ್ದಾರೆ ಎನ್ನುವ ವಿಷಯ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಿನೀವಾ ಒಪ್ಪಂದದ ಕುರಿತು ಭಾರೀ ಚರ್ಚೆ ಆರಂಭವಾಗಿದೆ.
ಯುದ್ದ ಕೈದಿಗಳನ್ನು ಹೇಗೆ ನಡೆಸಿಕೊಳ್ಳಬೇಕು ಎನ್ನುವ ಕುರಿತು ಆಗಿರುವ ಒಪ್ಪಂದವೇ ಜಿನೀವಾ ಒಪ್ಪಂದ. ಯುದ್ಧದ ಸನ್ನಿವೇಶದಲ್ಲಿ ಸೈನಿಕರನ್ನು ಮತ್ತು ಜನರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬ ಬಗ್ಗೆ ಜಿನೀವಾ ಒಪ್ಪಂದ ಮಾರ್ಗಸೂಚಿಗಳನ್ನು ಒಳಗೊಂಡಿದೆ. ಗಾಯಗೊಂಡ ಸೈನಿಕರ ಹಕ್ಕುಗಳು, ಯುದ್ಧ ಭೂಮಿಯ ಸುತ್ತಮುತ್ತ ಸೆರೆ ಸಿಕ್ಕ ಜನರ ಹಕ್ಕುಗಳ ರಕ್ಷಣೆ ಬಗ್ಗೆ ಹಲವು ಮಾರ್ಗಸೂಚಿಗಳನ್ನು ಒಳಗೊಂಡಿದೆ.
1949ರ 2ನೇ ಮಹಾಯುದ್ಧದ ಸಂದರ್ಭದಲ್ಲಿ ಜಿನೀವಾ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.
ಒಪ್ಪಂದದ ಪ್ರಮುಖ ಅಂಶ 1 : ಜಿನೀವಾ ಒಪ್ಪಂದ ಮೊದಲನೆ ಅಂಶ ಗಾಯಗೊಂಡ ಸೈನಿಕರಿಗೆ ಸಂಬಂಧಿಸಿದೆ. ಯುದ್ಧದ ಸಂದರ್ಭದಲ್ಲಿ ಗಾಯಗೊಂಡ ಸೈನಿಕನಿಗೆ ಧರ್ಮ, ಬಣ್ಣ, ಲಿಂಗ ಬೇಧವಿಲ್ಲದೇ ಚಿಕಿತ್ಸೆ ನೀಡಬೇಕು. ಸೆರೆ ಸಿಕ್ಕ ಸೈನಿಕರನ್ನು ಹಿಂಸೆ ಮಾಡುವುದು ಹತ್ಯೆ ಮಾಡುವುದನ್ನು ನಿಷೇಧಿಸಿದೆ. ಒಪ್ಪಂದದ ಅಂಶ 2 : ಈ ಅಂಶದ ಪ್ರಕಾರ ನೌಕಾಪಡೆಯ ಹಡಗು ಮುಳುಗಡೆಯಾದರೆ ಸೈನಿಕರ ರಕ್ಷಣೆ ಬಗ್ಗೆ ಇದೆ. ವಿಮಾನ ಪತನವಾದಾಗಲೂ ನಿಯಮ ಪಾಲನೆ ಮಾಡಬೇಕು ಎಂದಿದೆ. ಹಡಗಿನಲ್ಲಿರುವ ಆಸ್ಪತ್ರೆಗಳಿಗೆ ವಿಶೇಷ ರಕ್ಷಣೆ ನೀಡಬೇಕು ಎಂದು ಹೇಳಿದೆ. ಒಪ್ಪಂದದ ಅಂಶ 3 : ಯುದ್ಧದ ಸಂದರ್ಭದಲ್ಲಿ ಸೆರೆ ಸಿಕ್ಕ ಖೈದಿಯ ಬಗ್ಗೆ 3ನೇ ಅಂಶ ಒಳಗೊಂಡಿದೆ. ಖೈದಿಗೆ ಸೂಕ್ತ ಚಿಕಿತ್ಸೆ ನೀಡಬೇಕು. ಕೈದಿಯ ಹೆಸರು, ಹುದ್ದೆ, ಸೀರಿಯಲ್ ನಂಬರ್ಗಳನ್ನು ಎದುರಾಳಿಗಳ ಜೊತೆ ಹಂಚಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಅವರನ್ನು ಹಿಂಸೆ ಮಾಡುವಂತಿಲ್ಲ. ಒಪ್ಪಂದದ ಅಂಶ 4 : ಯುದ್ಧದ ಸಂದರ್ಭದಲ್ಲಿ ಜನರು ಸೆರೆ ಸಿಕ್ಕರೆ ಅವರನ್ನು ಅಮಾನವೀಯವಾಗಿ ನಡೆಸಿಕೊಳ್ಳುವಂತಿಲ್ಲ.
ಪಾಕಿಸ್ತಾನದ ಸೆರೆಯಲ್ಲಿರುವ ಪೈಲೆಟ್ ಅಭಿನಂದನ್ ಸುರಕ್ಷಿತವಾಗಿರುವುದಾಗಿ ಭಾರತ ಖಚಿತಪಡಿಸಿಕೊಂಡಿದೆ. ಅಲ್ಲದೆ, ಅವರನ್ನು ಬಿಡುಗಡೆ ಮಾಡುವಂತೆ ಸಮನ್ಸ್ ನೀಡಿದೆ. ತಮಗೆ ಯಾವುದೇ ರೀತಿಯ ಹಿಂಸೆ ನೀಡಲಾಗಿಲ್ಲ ಎಂದು ಅಭಿನಂದನ್ ತಿಳಿಸಿದ್ದಾರೆ.