ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಶಹಾಪುರದ ಶ್ರೀ ಸರಸ್ವತಿ ವಾಚನಾಲಯದ ವತಿಯಿಂದ ನೀಡಲಾಗುವ ೧೧ ನೇ ವರ್ಷದ ’ಬೆಳಗಾವಿ ಭೂಷಣ’ ಪ್ರಶಸ್ತಿಯನ್ನು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅವರಿಗೆ ಫೆ.೨೩ ರಂದು ಬೆಳಗ್ಗೆ ೧೦ ಕ್ಕೆ ವಾಚನಾಲಯ ಸಭಾಂಗಣದಲ್ಲಿ ಪ್ರದಾನ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಶ್ರೀಮತಿ ಮಾಯಿ ಠಾಕೂರ ನವೀಕೃತ ಸಭಾಗೃಹ ಹಾಗೂ ಮೊದಲ ಮಹಡಿಯ ಡಾ. ಶಕುಂತಲಾ ಗಿಜರೆ ಸಭಾಗೃಹಗಳ ಉದ್ಘಾಟನಾ ಸಮಾರಂಭಗಳು ಸಹ ನಡೆಯಲಿವೆ.
ಡಾ. ಪ್ರಭಾಕರ ಕೋರೆ ಅವರೊಂದಿಗೆ ತರುಣ ಭಾರತ ದಿನಪತ್ರಿಕೆ ಸಂಪಾದಕ ಕಿರಣ ಠಾಕೂರ ಅವರಿಗೂ ಬೆಳಗಾವಿ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಸಾಂಗಲಿ ಸಂಸ್ಥಾನದ ಶ್ರೀಮಂತ ವಿಜಯಸಿಂಹ ರಾಜೆ ಪಟವರ್ಧನ ಹಾಗೂ ಸಾಂಗಲಿ ಶಾಸಕ ಸುಧೀರ ಗಾಡಗೀಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸಂಜೆ ೫.೩೦ ಕ್ಕೆ ಪಂ. ಕುಮಾರ ಗಂಧರ್ವ ಸ್ಮೃತಿ ಸಂಗೀತ ಸಮ್ಮೇಳನ ನಿಮಿತ್ತ ಬೆಳಗಾವಿಯ ಶ್ರೀಧರ ಕುಲಕರ್ಣಿ, ಸಾಂಗಲಿಯ ಅಭಿಷೇಕ ಕಾಳೆ, ಮುಂಬಯಿಯ ಡಾ. ಕವಿತಾ ಗಾಡಗೀಳ ಹಾಗೂ ಮಿರಜದ ಋಷಿಕೇಶ ಬೋಡಸ ಇವರಿಂದ ಗಾಯನ ನಡೆಯಲಿದೆ.
ಸಂಸದ ಸುರೇಶ ಅಂಗಡಿ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಲಕ್ಷ್ಮೀ ಹೆಬ್ಬಾಳಕರ ಹಾಗೂ ಕೇಂದ್ರ ಕಾರಾಗೃಹದ ಅಧೀಕ್ಷಕ ಟಿ.ಪಿ. ಶೇಷ, ಮಹಾಪೌರ ಬಸಪ್ಪ ಚಿಕ್ಕಲದಿನ್ನಿ, ಉಪಮಹಾಪೌರ ಮಧುಶ್ರೀ ಪೂಜಾರಿ, ಮಾಜಿ ಮಹಾಪೌರರಾದ ಮಹೇಶ ನಾಯಿಕ, ಕಿರಣ ಸಾಯನಾಕ, ನಗರ ಸೇವಕಿ ಸುಧಾ ಬಾತಖಾಂಡೆ ಉಪಸ್ಥಿತರಿರುವರು ಎಂದು ವಾಚನಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.