ಪ್ರಗತಿವಾಹಿನಿ ಸುದ್ದಿ, ತುಮಕೂರು
ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ತುಮಕೂರಿನ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಣೆಗೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮಿಗಳು ಮತ್ತು ಗೃಹ ಸಚಿವ ಎಂ.ಬಿ.ಪಾಟೀಲ ಮಂಗಳವಾರ ಭೇಟಿ ನೀಡಿದ್ದರು.
ಪೇಜಾವರ ಶ್ರೀಗಳು ಮುಂಜಾನೆಯೇ ಭೇಟಿ ನೀಡಿದ್ದರಾದರೂ ಸಿದ್ಧಗಂಗಾ ಶ್ರೀಗಳ ಭೇಟಿ ಸಾಧ್ಯವಾಗಲಿಲ್ಲ. ಚಿಕಿತ್ಸೆ ಮುಂದುವರಿದಿರುವುದರಿಂದ ಮತ್ತು ಸೋಂಕು ತಗುಲಬಾರದೆನ್ನುವ ಕಾರಣದಿಂದ ಯಾರನ್ನೂ ಭೇಟಿಗೆ ಬಿಡಲಾಗುತ್ತಿಲ್ಲ.
ಗೃಹ ಸಚಿವ ಎಂ.ಬಿ.ಪಾಟೀಲ 12 ಗಂಟೆ ಹೊತ್ತಿಗೆ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಪ್ತರು ಮತ್ತು ವೈದ್ಯರೊಂದಿಗೆ ಆರೋಗ್ಯ ವಿಚಾರಿಸಿದರು.
ಈ ಮಧ್ಯೆ ಶ್ರೀಗಳ ಆರೋಗ್ಯ ನಿನ್ನೆಗಿಂತ ಇಂದು ಮತ್ತಷ್ಟು ಸುಧಾರಿಸಿದ್ದು, ದ್ರವ ಆಹಾರ ಸೇವಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಶ್ರೀಗಳ ದರ್ಶನಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಮಠಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ ಸಧ್ಯಕ್ಕೆ ಶ್ರೀಗಳ ದರ್ಶನ ಸಾಧ್ಯವಿಲ್ಲ ಎಂದು ವೈದ್ಯರು ಸ್ಪಷ್ಟವಾಗಿ ತಿಳಿಸಿದ್ದಾರೆ.
ಶ್ರೀಗಳ ಆರೋಗ್ಯ ಸುಧಾರಿಸಲಿ ಎಂದು ಮಠದಲ್ಲಿ ಆಶ್ರಯ ಪಡೆದಿರುವ ವಿದ್ಯಾರ್ಥಿಗಳು ಮಂಗಳವಾರ ಬೆಳಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ