LatestPolitics

ದತ್ತು ಪಡೆದ ಮಹಾ ಕನ್ನಡ ವಿದ್ಯಾರ್ಥಿನಿ ಸಾಧನೆಗೆ ಕೋರೆ ಹರ್ಷ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ತಾವು ದತ್ತು ಪಡೆದ ವಿದ್ಯಾರ್ಥಿನಿ ಪಿಯುಸಿಯಲ್ಲಿ ಮಾಡಿದ ಸಾಧನೆಗೆ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಖುಷಿಯಾಗಿದ್ದು, ಆಕೆಯನ್ನು ಅಭಿನಂದಿಸಿದ್ದಾರೆ. 

ಮಹಾರಾಷ್ಟ್ರದ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಶ್ವೇತಾ ಗೋರೆ ಪಿಯು ವಿಜ್ಞಾನ ವಿಷಯದಲ್ಲಿ  ಶೇ.91 ಅಂಕ ಪಡೆದು ಉತ್ತೀರ್ಣಗೊಂಡಿದ್ದಾಳೆ. 
ಅಕ್ಕಲಕೋಟ ನಗರದ ಕೆಎಲ್‌ಇ ಮಂಗರೂಳೆ ಪ್ರೌಢಶಾಲೆ ವಿದ್ಯಾರ್ಥಿನಿ ಶ್ವೇತಾ ಗೋರೆ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ.95 ಅಂಕ ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಆದರ್ಶ ವಿದ್ಯಾರ್ಥಿಗಳ ಸನ್ಮಾನ ಸಮಾರಂಭಕ್ಕೆ ಕೆಎಲ್‌ಇ ಸಂಸ್ಥೆಯ ಚೇರಮನ್‌  ಡಾ.ಪ್ರಭಾಕರ ಕೋರೆ ಅವರು ಅಕ್ಕಲಕೋಟಕ್ಕೆ ಆಗಮಿಸಿದ್ದರು. ವಿದ್ಯಾರ್ಥಿನಿಯ ಬಡತನವನ್ನು ಅರಿತ ಡಾ.ಕೋರೆ ಪಿಯುಸಿ ಅಧ್ಯಯನಕ್ಕೆ ಆಕೆಯನ್ನು ದತ್ತು ಪಡೆದುಕೊಂಡಿದ್ದರು.

ಹುಬ್ಬಳ್ಳಿ ಕೆಎಲ್‌ಇ ಸಂಸ್ಥೆಯ ಪ್ರೇರಣಾ ಪಿಯು ಕಾಲೇಜಿನಲ್ಲಿ ಪಿಯು ಸೈನ್ಸ್ ಅಧ್ಯಯನಕ್ಕಾಗಿ ಅವಳಿಗೆ ಉಚಿತ ಪ್ರವೇಶ ನೀಡಿದ್ದರು. ಅಲ್ಲದೇ ವಸತಿ ಮತ್ತು ಊಟದ ವ್ಯವಸ್ಥೆ ಮತ್ತು ನೀಟ್ ಪರೀಕ್ಷೆಗಾಗಿ ವಿವಿಧ ಕೋಚಿಂಗ್ ವ್ಯವಸ್ಥೆ ಒದಗಿಸಿದ್ದರು. ಇತ್ತೀಚಿಗೆ ಕರ್ನಾಟಕ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಶ್ವೇತಾ ಗೋರೆ ಶೇ.೯೧ ಅಂಕ ಪಡೆದು ಉತ್ತೀರ್ಣಗೊಂಡಿದ್ದಾಳೆ. ವಿದ್ಯಾರ್ಥಿನಿಯ ಈ ಸಾಧನೆಗೆ ಡಾ.ಪ್ರಭಾಕರ ಕೋರೆ ಅಭಿನಂದಿಸಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ಗಿರೀಶ ಪಟ್ಟೇದ ಹಾಗೂ ಗೋರೆ ಕುಟುಂಬದವರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಈ ಸಂದರ್ಭದಲ್ಲಿ ಮಾತನಾಡುತ್ತ, ನನಗೆ ಓದುವ ಇಚ್ಛೆ ಇದೆ. ಆದರೆ ನಮ್ಮ ಕುಟುಂಬಕ್ಕೆ ಆರ್ಥಿಕ ಸಮಸ್ಯೆಯಿದೆ. ನಮ್ಮ ತಂದೆ ಅಲ್ಲಿ ಇಲ್ಲಿ ಕೆಲಸ ಮಾಡಿ ನಮ್ಮನ್ನು ನೋಡಿಕೊಳ್ಳುತ್ತಾರೆ. ತಾಯಿ ಮನೆ ಕೆಲಸ ಮಾಡುತ್ತಾಳೆ.  ಕೆಎಲ್‌ಇ ಸಂಸ್ಥೆ ಚೇರಮನ್ ಡಾ.ಪ್ರಭಾಕರ ಕೋರೆ ಅವರ ಸಹಕಾರದಿಂದ ನಾನು ಪಿಯು ಶಿಕ್ಷಣ ಓದಲು ಸಾಧ್ಯವಾಗಿದೆ. ಅಲ್ಲದೇ ಇತ್ತೀಚೆಗೆ ನೀಟ್ ಪರೀಕ್ಷೆ ಚೆನ್ನಾಗಿ ಬರೆದಿದ್ದು, ಮುಂದೆ ಎಂಬಿಬಿಎಸ್ ಓದುವ ಆಸೆಯಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾಳೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button