Latest

ನರೇಂದ್ರ ಮೋದಿ ವಿಶ್ವದ ಅದ್ಬುತ ನಾಯಕ : ಬಿ.ಎಸ್.ವೈ

ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಭಾರತ ಭ್ರಷ್ಠಾಚಾರ ಮುಕ್ತ ರಾಷ್ಟ್ರವಾಗಲು ಪಣತೊಟ್ಟಿರುವ ನರೇಂದ್ರ ಮೋದಿಯವರು ಮತ್ತೆ ಈ ದೇಶದ ಪ್ರಧಾನಿಯಾಗಲಿದ್ದಾರೆ. 300ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದ್ದು, ರಾಜ್ಯದಲ್ಲಿ 22 ಸ್ಥಾನಗಳು ಬಿಜೆಪಿ ಮಡಿಲಿಗೆ ಬೀಳಲಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಲೋಕಸಭಾ ಚುನಾವಣೆ ನಿಮಿತ್ಯ ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರಗಳ ಚುನಾವಣಾ ಪ್ರಚಾರ ಸಭೆಯನ್ನುದ್ಧೇಶಿಸಿ ಮಾತನಾಡಿದ ಅವರು, ಇಡೀ ಪ್ರಪಂಚವೇ ಮೋದಿಯವರತ್ತ ನೋಡುತ್ತಿದೆ. ವಿಶ್ವದ ಬಲಾಢ್ಯ ನಾಯಕರಲ್ಲಿ ನಮ್ಮ ದೇಶದ ಪ್ರಧಾನಿ ಸೇರಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶಗಳ ಅತ್ಯುನ್ನತ ನಾಗರೀಕ ಪ್ರಶಸ್ತಿಗಳನ್ನು ನೀಡಿವೆ ಎಂದು ಹೇಳಿದರು.
ಕಳೆದ 5 ವರ್ಷಗಳಲ್ಲಿ ಅದ್ಬುತ ಸಾಧನೆ ಮಾಡಿರುವ ನರೇಂದ್ರ ಮೋದಿ ಅವರು ಎಲ್ಲ ವರ್ಗಗಳ ಹಿತಕ್ಕನುಗುಣವಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದಾರೆ. ದೇಶವನ್ನು ಭ್ರಷ್ಠಾಚಾರ ಮುಕ್ತವನ್ನಾಗಿ ಮಾಡುವುದು ಜನಸಾಮಾನ್ಯರ ಅಭಿವೃದ್ಧಿ, ದೇಶದ ಗಡಿ ರಕ್ಷಣೆ, ದೇಶದ ಆರ್ಥಿಕ ಸುಧಾರಣೆ, 60 ವರ್ಷ ಮೇಲ್ಪಟ್ಟ ರೈತರಿಗೆ ಪಿಂಚಣಿ ಸೌಲಭ್ಯ, ರೈತರ ಆದಾಯ ಹೆಚ್ಚಳ, ಈ ದೇಶದ ಎಲ್ಲ ನದಿಗಳ ಜೋಡಣೆಗೆ ಅಗತ್ಯ ಕ್ರಮ, ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ, ಶಾಸನ ಸಭೆಯಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ಸೇರಿದಂತೆ ನೂರಾರು ಯೋಜನೆಗಳನ್ನು ನೀಡಿದ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾಂಗ್ರೇಸ್‍ನ್ನು ಹುಡುಕಬೇಕಿದೆ : ಈ ಲೋಕಸಭಾ ಚುನಾವಣೆ ನಂತರ ಕಾಂಗ್ರೇಸ್ ಪಕ್ಷವನ್ನು ಹುಡುಕಬೇಕಿದೆ. ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ನಂತರ ಕಾಂಗ್ರೇಸ್ ಪಕ್ಷ ಎಲ್ಲಿದೆಯೋ ಅದನ್ನು ಹುಡುಕಬೇಕಾದ ಪರಿಸ್ಥಿತಿ ಬರಲಿದೆ ಎಂದು ಯಡಿಯೂರಪ್ಪ ವ್ಯಂಗ್ಯ ಮಾಡಿದರು.
ಸ್ವತಃ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕ ಜನಾರ್ಧನ ಪೂಜಾರಿ ಅವರು ಮೋದಿ ಅವರು ಇನ್ನೂ ಎರಡು ಅವಧಿಗೆ ಪ್ರಧಾನಿಯಾಗುತ್ತಾರೆಂದು ಹೇಳಿರುವುದು ಮೋದಿಯವರ ಜನಪ್ರೀಯತೆಯನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿದರು.
ಮೈತ್ರಿ ಸರ್ಕಾರದ ವಿರುದ್ಧ ವಾಗ್ದಾಳಿ : ರಾಜ್ಯದಲ್ಲಿ ಮೈತ್ರಿ ಸರ್ಕಾರ ತುಘಲಕ್ ದರ್ಬಾರ ನಡೆಸಿದೆ. ಸರ್ಕಾರದಲ್ಲಿ ಹೊಂದಾಣಿಕೆಯಂತೂ ಇಲ್ಲವೇ ಇಲ್ಲ. ಕಾಂಗ್ರೇಸ್ ನಡಿಗೆ ಕೃಷ್ಣೆ ಕಡೆಗೆ ಪಾದಯಾತ್ರೆ ಬುರುಡೆಯಾಗಿದೆ. ನೀರಾವರಿ ಯೋಜನೆಗಳನ್ನು ಸಂಪೂರ್ಣವಾಗಿ ಮೈತ್ರಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಕುಮಾರಸ್ವಾಮಿಯವರು ಮುಂಗಡ ಪತ್ರದಲ್ಲಿ ಮಹಾದಾಯಿ ಹಾಗೂ ಕೃಷ್ಣಾ ಯೋಜನೆಗೆ ಒಂದು ರೂಪಾಯಿ ಸಹ ನೀಡಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇನೆಂದು ಅಧಿಕಾರಕ್ಕೆ ಬಂದಿರುವ ಸರ್ಕಾರ 49 ಸಾವಿರ ಕೋಟಿ ರೂ.ಗಳಲ್ಲಿ ಕೇವಲ 450 ಕೋಟಿ ರೂ.ಗಳನ್ನಷ್ಟೇ ನೀಡಿದೆ. ಸರ್ಕಾರ ಅಭಿವೃದ್ಧಿ ಮಾಡದೇ ಕಮಿಷನ್ ದಂಧೆಯಲ್ಲಿ ಮುಳುಗಿದೆ ಎಂದು ಆರೋಪಿಸಿದ ಯಡಿಯೂರಪ್ಪ ಅವರು, ಹಾಸನದಲ್ಲಿ 1350 ಕೋಟಿ ರೂ.ಗಳ ಕಾಮಗಾರಿ ಆರಂಭಕ್ಕೂ ಮುನ್ನವೇ ಕಮಿಷನ್ ಪಡೆದಿರುವುದು ನಿರ್ಲಜ್ಯಕ್ಕೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಕಾನೂನು ಜ್ಞಾನ ಇಲ್ಲ. ಇತ್ತೀಚೆಗೆ ಐಟಿ ಕಛೇರಿ ಮುಂದೆ ಸ್ವತಃ ಪ್ರತಿಭಟನೆಗೆ ಇಳಿದಿರುವುದು ಅವರ ಹುದ್ದೆಗೆ ತಕ್ಕದ್ದಲ್ಲ. ಸಾವಿರಾರು ಕೋಟಿ ರೂ. ಅಕ್ರಮ ಹಣವನ್ನು ಬೇರೆಡೆಗೆ ಸಾಗಿಸಿದ್ದಾರೆ. ರಾಜ್ಯ ಕಂಡ ಅತ್ಯಂತ ಭ್ರಷ್ಠ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಟೀಕಿಸಿದರು. ಈ ಮೈತ್ರಿ ಸರ್ಕಾರ ಶೇ 20 ರಷ್ಟು ಕಮಿಷನ್ ಸರ್ಕಾರವೆಂದು ಟೀಕಿಸಿದರು.
ಬೆಳಗಾವಿ ಲೋಕಸಭೆಗೆ ಸ್ಪರ್ಧಿಸಿರುವ ಸುರೇಶ ಅಂಗಡಿ ಅವರನ್ನು ಅತ್ಯಂತ ಬಹುಮತದಿಂದ ಆರಿಸಿ ತರುವಂತೆ ಮನವಿ ಮಾಡಿಕೊಂಡ ಅವರು, ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಅಂಗಡಿ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆಂದು ಹೇಳಿದರು.

ಅರಭಾವಿಯಿಂದ ಹೆಚ್ಚಿನ ಮುನ್ನಡೆ :

ಗೋಕಾಕ ಹಾಗೂ ಅರಭಾವಿ ಮತಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ‘ಲೀಡ್’ ನೀಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.


ಬಿಜೆಪಿಗೆ ದೊಡ್ಡ ಶಕ್ತಿ : ಎಪ್ರೀಲ್ 23 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗೋಕಾಕ ಕ್ಷೇತ್ರಕ್ಕೆ ಈ ಬಾರಿ ವಿಶೇಷವಾಗಲಿದೆ. ಬಿಜೆಪಿಗೆ ಹೆಚ್ಚಿನ ಪ್ರಮಾಣದಲ್ಲಿ ಮತಗಳು ಪ್ರಾಪ್ತಿಯಾಗಿ ಸುರೇಶ ಅಂಗಡಿ ಅವರು ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ. ಗೋಕಾಕ ಕ್ಷೇತ್ರದಲ್ಲಿ ಬಿಜೆಪಿಗೆ ವಿಶೇಷ ವ್ಯಕ್ತಿಯೊಬ್ಬರು ಕಾರ್ಯಕರ್ತರಿಗೆ ಶಕ್ತಿ ತುಂಬಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಜಯಬೇರಿ ಬಾರಿಸಿದರೆ ರಾಜ್ಯಕ್ಕೆ ಉಜ್ವಲ ಭವಿಷ್ಯವಿದೆ. ಒಳ್ಳೆಯ ದಿನಗಳು ಜನರಿಗೆ ಬರಲಿವೆ ಎಂದರು.
ಸಂಸದ ಸುರೇಶ ಅಂಗಡಿ ಅವರಿಗೆ ಬೆಳಗಾವಿ ಲೋಕಸಭಾ ವ್ಯಾಪ್ತಿ ದೊಡ್ಡದಿರುವುದರಿಂದ ಎಲ್ಲರನ್ನು ಭೇಟಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೆಲ ಕಾರ್ಯಕರ್ತರು ಸಂಸದರ ವಿರುದ್ಧ ಅಸಮಾಧಾನಗೊಂಡಿರಬಹುದು. ಸಣ್ಣಪುಟ್ಟ ವ್ಯತ್ಯಾಸಗಳನ್ನು ಮರೆತು ಈ ಚುನಾವಣೆಯಲ್ಲಿ ಎಲ್ಲರೂ ಒಂದಾಗಿ ದುಡಿದು ಪ್ರಧಾನಿ ನರೇಂದ್ರ ಮೋದಿ, ಯಡಿಯೂರಪ್ಪನವರ ಕೈ ಬಲಪಡಿಸಲು ಸುರೇಶ ಅಂಗಡಿಯವರನ್ನು ಆಯ್ಕೆ ಮಾಡಬೇಕಿದೆ. ಇವರು ಆಯ್ಕೆಯಾದ ನಂತರ ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರಸ್ತೆಗಳ ಅಭಿವೃದ್ಧಿಗೆ ಕೇಂದ್ರದಿಂದ ಸಿಆರ್‍ಎಫ್ ಯೋಜನೆಯಡಿ 300 ಕೋಟಿ ರೂ.ಗಳ ಅನುದಾನ ಸೇರಿದಂತೆ ಕೇಂದ್ರದಿಂದ ವಿವಿಧ ಅಭಿವೃದ್ಧಿಪರ ಯೋಜನೆಗಳನ್ನು ನೀಡುವಂತೆ ಅಂಗಡಿಯವರಲ್ಲಿ ಕೋರಿರುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಲೋಕಸಭಾ ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಮಾತನಾಡಿ, ದೇಶದ 130 ಕೋಟಿ ಜನರಿಗೆ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೇಸ್ ಸರ್ಕಾರ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತ ರೈತರಿಗೆ ಟೋಪಿ ಹಾಕಿದೆ ಎಂದು ಆರೋಪಿಸಿದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಾಗೂ ದೇಶದ ಒಳತಿಗಾಗಿ ಮೋದಿಯವರು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಪ್ರಚಂಡ ಬಹುಮತದಿಂದ ಆರಿಸಿ ತರುವಂತೆ ಕೋರಿದರು.

ವಿಧಾನ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಬಿಜೆಪಿಗೂ ಮುನ್ನ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ಕೇಂದ್ರದಲ್ಲಿ ವ್ಯಾಪಕ ಭ್ರಷ್ಠಾಚಾರ ನಡೆಸಿದೆ. ನಂತರ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ದೇಶದ ಜನತೆಗೆ ಭ್ರಷ್ಠಾಚಾರ ರಹಿತ ಸರ್ಕಾರ ನೀಡಿರುವುದು ಹೆಮ್ಮೆಯಾಗಿದೆ. ಮುಂಬೈ ಕರ್ನಾಟಕದ ಬೆಳಗಾವಿ, ಚಿಕ್ಕೋಡಿ ಸಹಿತ 7 ಲೋಕಸಭಾ ಕ್ಷೇತ್ರಗಳು ಬಿಜೆಪಿ ಮಡಿಲಿಗೆ ಬೀಳಲಿವೆ ಎಂದು ಹೇಳಿದರು.

ಶಾಸಕರಾದ ಆನಂದ ಮಾಮನಿ, ಮಹಾದೇವಪ್ಪ ಯಾದವಾಡ, ಮಾಜಿ ಶಾಸಕರಾದ ಸಂಜಯ ಪಾಟೀಲ, ಎಂ.ಎಲ್. ಮುತ್ತೆನ್ನವರ, ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ ಹಿರೇಮನಿ, ಮುಖಂಡರಾದ ಅಶೋಕ ಪೂಜೇರಿ, ಈರಪ್ಪ ಕಡಾಡಿ, ಕೆಎಲ್‍ಇ ನಿರ್ದೇಶಕ ಜಯಾನಂದ ಮುನವಳ್ಳಿ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರೇಮಾ ಬಂಡಾರಿ, ಸೇರಿದಂತೆ ಪಕ್ಷದ ಅನೇಕರು ವೇದಿಕೆಯಲ್ಲಿದ್ದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಎಸ್.ವ್ಹಿ. ದೇಮಶೆಟ್ಟಿ ಸ್ವಾಗತಿಸಿದರು. ಅರಭಾವಿ ಮಂಡಲ ಅಧ್ಯಕ್ಷ ಸುಭಾಸ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಮಾದರ ವಂದಿಸಿದರು.

(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಹಾಗೂ ಎಲ್ಲಾ ಫೇಸ್ ಬುಕ್, ವಾಟ್ಸಪ್ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button