Belagavi NewsBelgaum NewsKannada NewsKarnataka NewsPolitics

*ಫೆ.19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ: ಬೆಳಗಾವಿಯಲ್ಲಿ ವಿಜಯೇಂದ್ರ ಹೇಳಿಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಫೆಬ್ರವರಿ 19ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ‌‌. ಸಭೆಯಲ್ಲಿ ಮುಂದಿನ ಕೆಲವು ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿವರಿಸಿದರು‌.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಾರ್ಯಕಾರಣಿ ಸಭೆಯಲ್ಲಿ ಜಿಪಂ, ತಾಪಂ, ಗ್ರೇಟರ್ ಬೆಂಗಳೂರು, ವಿಧಾನಪರಿಷತ್ ಸ್ಥಾನಗಳ ಚುನಾವಣೆ, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಚರ್ಚೆ ಮಾಡುತ್ತೇವೆ. ಉದ್ಘಾಟನೆಗೆ ಹಿರಿಯ ಸಚಿವರು ಬರುತ್ತಾರೆ. 

Home add -Advt

ಸಮಾರೋಪ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಬರುತ್ತಾರೆ. ನಾಲಾಯಕ ಕಾಂಗ್ರೆಸ್ ಸರ್ಕಾರ ಜನರಿಗೆ ಹೇಗೆ ಮೋಸ ಮಾಡುತ್ತಿದೆ ಎಂಬುದರ ಬಗ್ಗೆಯೂ ಚರ್ಚಿಸಲಾಗುವುದು. ಸರ್ಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂದರು.

ಕೈ ಶಾಸಕರ ವಿದೇಶ ಪ್ರವಾಸ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಶಾಸಕರನ್ನು ತಾವೇ ವಿದೇಶ ಪ್ರವಾಸಕ್ಕೆ ಕಳಿಸುತ್ತಿದ್ದಾರೆ.  ಈ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ ಆದ್ಯತೆ ಏನು ಅಂತಾ ಇದರಲ್ಲೆ ಗೊತ್ತಾಗುತ್ತದೆ. ಸರ್ಕಾರ ಬಂದ ಬಳಿಕ ಅ‌ನುದಾನಕ್ಕೆ ಬೇಡಿಕೆ ಇಟ್ಟಿದ್ದರು. ಗಂಗಕಲ್ಯಾಣ, ಮನೆ ಕಟ್ಟಲು ಸಾಧ್ಯವಾಗಿಲ್ಲ. ಲಜ್ಜೆಗೆಟ್ಟ ಸರ್ಕಾರ ರಾಜ್ಯದ ಇತಿಹಾಸದಲ್ಲಿ ನೋಡಿಲ್ಲ ಅಂತಾ ಜನ ಮಾತನಾಡುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಹಣ ಕೊಡುತ್ತಿಲ್ಲ. ಅವರ ಸ್ವಂತ ಖರ್ಚಿನಲ್ಲಿ ಶಾಸಕರು ವಿದೇಶಕ್ಕೆ ಹೋಗುತ್ತಿದ್ದಾರೆ ಅಂತಾ ನಿನ್ನೆ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಆದರೆ, ತಮ್ಮ ಕುರ್ಚಿ ಉಳಿಸಿಕೊಳ್ಳಲು ತಾವೇ ಅವರನ್ನು ವಿದೇಶಕ್ಕೆ ಕಳಿಸುತ್ತಿದ್ದಾರೆ ಎಂದು ಕುಟುಕಿದರು‌. 

ಕಾಂಗ್ರೆಸ್ ಶಾಸಕರು ರೆಸಾರ್ಟ್ ಬುಕ್ ಮಾಡಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಅವರಿಗೆ ಅನುಕೂಲ ಆಗಲಿ ಅಂತಾ ಬಿಜೆಪಿಯಿಂದ ಬಡಿಗೆ ರೆಡಿ ಮಾಡಿಸಿದ್ದೇವೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ಯಾರಿಗೆ ಹೇಳುತ್ತಾರೆ ಅವರಿಗೆ ಬಡಿಗೆ ಕೊಡುತ್ತೇವೆ. ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳಲಿ. ಆ ಹಂತಕ್ಕೆ ಅವರು ಬಂದಿದ್ದಾರೆ. ಮುಂದೆ ಏನಾಗುತ್ತೆ ಕಾದು ನೋಡೋಣ ಎಂದು ವಿಜಯೇಂದ್ರ ಲೇವಡಿ ಮಾಡಿದರು.

ಯತೀಂದ್ರ ಅವರು ದಿನಕ್ಕೊಂದು ಹೇಳಿಕೆ ನೀಡುತ್ತಿರುತ್ತಾರೆ. ನಮ್ಮ ಪಕ್ಷದ ಹೈಕಮಾಂಡ್ ಅವರು ಹೇಳಿದಂತೆ ಕೇಳಿಕೊಂಡು ಹೋಗುತ್ತೇವೆ ಅಂತಾ ಡಿ.ಕೆ.ಶಿವಕುಮಾರ ಅವರೇ ಹೇಳಿದ್ದಾರೆ. ಅವರ ಎಲ್ಲಾ ಮಾತುಗಳಿಗೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಆದರೆ, ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು ರಾಜ್ಯದ ಹಿತಾಸಕ್ತಿ ಬಲಿ ಕೊಡುತ್ತಿರುವುದು ಸತ್ಯ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎನ್ನುತ್ತಾ ರಾಜ್ಯದ ಗೌರವ ಹಾಳು ಮಾಡುತ್ತಿದ್ದಾರೆ. ಅಭಿವೃದ್ಧಿ ಏನೂ ಆಗುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ. ಎಲ್ಲ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಅಂತಾ ಆರೋಪಿಸಿದರು. 

ಇತ್ತಿಚೆಗೆ ಪ್ರೊ.ಎಂ‌.ಗೋವಿಂದರಾಜ್ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆ ಸಮಿತಿ ವರದಿ ನೀಡಿದೆ. ರಾಜ್ಯ ಸರ್ಕಾರಕ್ಕೆ ವರದಿ ಕೊಡಲಾಗಿದೆ. ಶೇಕಡಾ 60ರಷ್ಟು ಇದ್ದ ಅಸಮಾನತೆ, ಈಗ ಶೇ. 72.08ಕ್ಕೆ ಏರಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಮುಖ್ಯಮಂತ್ರಿಗಳೋ ಅಥವಾ ರಾಜ್ಯಕ್ಕೆ ಮುಖ್ಯಮಂತ್ರಿಗಳೋ ಎಂಬ ಪ್ರಶ್ನೆ ಉದ್ಭವಿಸಿದೆ. ಅನುದಾನ ಬಿಡುಗಡೆ ಮಾಡಿದರೆ ಸಾಕಾಗುವುದಿಲ್ಲ‌.

ಯಾವ ರೀತಿ ಬಳಕೆ ಆಗುತ್ತಿದೆ ನೋಡಬೇಕು ಇದಕ್ಕೂ ಸಿಎಂ ಸಿದ್ದರಾಮಯ್ಯ ಉತ್ತರ ಕೊಡಬೇಕು. ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಾದೇಶಿಕ ಅಸಮಾನತೆ ಹೆಚ್ಚಿದೆ. ಕಲಬುರ್ಗಿಯಲ್ಲಿ ಶೇ. 65ರಷ್ಟು ಪ್ರಾದೇಶಿಕ ಅಸಮಾನತೆ ಇದೆ. ಇಷ್ಟಿದ್ದರೂ ಪ್ರಿಯಾಂಕ್ ಖರ್ಗೆ ಬೊಬ್ಬೆ ಹೊಡೆಯುತ್ತಾರೆ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು. 

ಮರಣ ಹೊಂದುವ ಕುರಿ ಮೇಕೆಗಳಿಗೆ ಅನುಗೃಹ ಯೋಜನೆಯಡಿ ಹಣ ಕೊಟ್ಟಿಲ್ಲ. ರಾಜ್ಯ ಸರ್ಕಾರ 45 ಕೋಟಿ ಬಾಕಿ ಇಟ್ಟುಕೊಂಡಿದೆ. ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳುವ ಭರಾಟೆಯಲ್ಲಿ ಅವರಿಗೆ ಯಾರು ಕಾಣುತ್ತಿಲ್ಲ. ಡಿಸೆಂಬರ್ ವರೆಗೂ ಸಾವನ್ನಪ್ಪಿದ 90 ಸಾವಿರ ಪೈಕಿ 30 ಸಾವಿರ ಕುರಿಮರಿಗಳಿಗೆ ಮಾತ್ರ ಪರಿಹಾರ ಕೊಟ್ಟಿದ್ದಾರೆ. ಅಹಿಂದಾ ಹೆಸರು ಹೇಳುವ ಮುಖ್ಯಮಂತ್ರಿಗಳು ರಾಜ್ಯದ ಕುರಿಗಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು.

Related Articles

Back to top button