CrimeKannada NewsKarnataka NewsLatest

*ನವವಿವಾಹಿತೆ ಪ್ರಿಯಾಂಕಾ ನಾಪತ್ತೆ ಪ್ರಕರಣಕ್ಕೆ ಸ್ಫೋಟಕ ತಿರುವು*

ಪ್ರಗತಿವಾಹಿನಿ ಸುದ್ದಿ: ಭಾರಿ ಕುತೂಹಲ ಹಾಗೂ ಅನುಮಾನಕ್ಕೆ ಕಾರಣವಾಗಿರುವ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದ ನವವಿವಾಹಿತೆ ಪ್ರಿಯಾಂಕಾ ನಿಗೂಢ ಕಣ್ಮರೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಕಣ್ಮರೆಯಾಗಿರುವ ಪ್ರಿಯಾಂಕಾ ಹಾಗೂ ಆಕೆಯ ಪೋಷಕರ ವಿರುದ್ಧ ಪತಿ ರಾಜಶೇಖರ ಅವರ ಕುಟುಂಬಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ರಿಯಾಂಕಾಗೆ ರಾಜಶೇಖರ ಅವರನ್ನು ವಿವಾಹವಾಗುವುದಕ್ಕೂ ಮುನ್ನವೇ ಮತ್ತೊಂದು ಮದುವೆಯಾಗಿತ್ತು. ಈ ವಿಚಾರವನ್ನು ಮುಚ್ಚಿಟ್ಟು ಆಕೆಯನ್ನು ರಾಜಶೇಖರ ಜೊತೆ ಮದುವೆ ಮಾಡಿಕೊಡಲಾಗಿತ್ತು ಎಂದು ಪತಿಯ ದೊಡ್ಡಪ್ಪ ಮಂಜುನಾಥ್ ಹಾಗೂ ಸಂಬಂಧಿಕರು ಆರೋಪಿಸಿದ್ದಾರೆ.

ಹಾಸನದ ಪ್ರಿಯಾಂಕಾ ಮತ್ತು ರಾಜಶೇಖರ ಅವರ ಮದುವೆ ನಡೆಯುತ್ತಿದ್ದ ದಿನವೇ ಆಕೆಯ ಹಳೆಯ ಗಂಡ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಬಂದಿದ್ದ ಎಂದು ಪತಿಯ ಸಂಬಂಧಿಕರು ಹೇಳಿದ್ದಾರೆ. ಮಗಳು ಹಳೆಯ ಗಂಡನೊಂದಿಗೆ ಓಡಿಹೋಗಬಹುದು ಎಂಬ ಆತಂಕದಿಂದ ಆಕೆಯ ಪೋಷಕರು ಹಿಂದಿನ ಮದುವೆ ಹಾಗೂ ಪ್ರೇಮ ಸಂಬಂಧದ ವಿಚಾರವನ್ನು ಮುಚ್ಚಿಟ್ಟು ರಾಜಶೇಖರ ಜೊತೆ ಮದುವೆ ಮಾಡಲು ಮುಂದಾಗಿದ್ದರು ಎಂದು ಅವರು ಆರೋಪಿಸಿದ್ದಾರೆ.

ಪ್ರಿಯಾಂಕಾ ಮದುವೆಗೆ ಒಪ್ಪದಿದ್ದಾಗ ತಂದೆ-ತಾಯಿ ವಿಷದ ಬಾಟಲಿ ಹಿಡಿದು ಬೆದರಿಸಿ, ಒತ್ತಾಯಪೂರ್ವಕವಾಗಿ ರಾಜಶೇಖರ ಜೊತೆ ಮದುವೆಗೆ ಒಪ್ಪಿಸಿದ್ದರು ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ಪ್ರಿಯಾಂಕಾಳ ಹಿಂದಿನ ಮದುವೆ ಹಾಗೂ ಪ್ರೇಮ ಪ್ರಕರಣದ ಬಗ್ಗೆ ಕುಟುಂಬಕ್ಕೆ ಮಾಹಿತಿ ಇದ್ದ ಕಾರಣ ಆಕೆಗೆ ಮೊಬೈಲ್ ಫೋನ್ ಕೂಡ ನೀಡುತ್ತಿರಲಿಲ್ಲ ಎಂದು ಪತಿಯ ಸಂಬಂಧಿಕರು ಆರೋಪಿಸಿದ್ದಾರೆ.

ಮದುವೆಗೂ ಮುನ್ನವೇ ಪ್ರಿಯಾಂಕಾಳನ್ನು ರಾಜಶೇಖರ ಅವರ ಮನೆಗೆ ಕರೆತಂದು ಬಿಟ್ಟು ಹೋಗಿದ್ದರು ಎನ್ನಲಾಗಿದ್ದು, ಮದುವೆಯಾದ ಬಳಿಕ ಆಕೆ ಗಂಡನನ್ನು ಬಿಟ್ಟು ಮತ್ತೆ ಓಡಿಹೋಗಬಹುದು ಎಂಬ ಆತಂಕದಿಂದ ಆಕೆಯ ಪೋಷಕರು ಪದೇಪದೇ ರಾಜಿ ಸಂಧಾನ ಮಾಡುತ್ತಿದ್ದರು ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಪ್ರಿಯಾಂಕಾ ನಾಪತ್ತೆಯಾದ ಹಿನ್ನೆಲೆಯಲ್ಲಿ ಆಕೆಯ ಸ್ಥಿತಿಯ ಬಗ್ಗೆ ಪತಿಯ ಕುಟುಂಬಸ್ಥರು ಹಲವು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. “ಹೆಣ್ಣಿನ ಮನೆಯವರು ಮಾಡಿದ ತಪ್ಪಿನಿಂದ ಹಾಗೂ ಸತ್ಯ ಮುಚ್ಚಿಟ್ಟಿದ್ದರಿಂದ ನಮ್ಮ ಹುಡುಗ ರಾಜಶೇಖರನ ಜೀವನ ಹಾಳಾಗಿದೆ. ಪ್ರಿಯಾಂಕಾಗೆ ಚೆನ್ನಾಗಿ ಈಜು ಬರುತ್ತಿತ್ತು. ಹೀಗಾಗಿ ಆಕೆ ನಿಜವಾಗಿಯೂ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾಳೆಯೇ ಅಥವಾ ಜೀವಂತವಾಗಿದ್ದು ಎಲ್ಲಾದರೂ ಹೋಗಿದ್ದಾಳೆಯೇ ಎಂಬ ಅನುಮಾನ ನಮಗಿದೆ” ಎಂದು ಪತಿಯ ಸಂಬಂಧಿಕರು ಹೇಳಿದ್ದಾರೆ.

ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಪ್ರಿಯಾಂಕಾಳ ವೈವಾಹಿಕ ಹಿನ್ನೆಲೆ, ಆಕೆಯ ಹಿಂದಿನ ಸಂಬಂಧಗಳು ಹಾಗೂ ಕಣ್ಮರೆಯಾದ ಸಂದರ್ಭ ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪತಿಯ ಕುಟುಂಬ ಮಾಡಿರುವ ಆರೋಪಗಳು ತನಿಖೆಯಲ್ಲಿ ಎಷ್ಟರ ಮಟ್ಟಿಗೆ ಸತ್ಯ ಎಂಬುದು ಪೊಲೀಸ್ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button