Belagavi NewsBelgaum NewsCrimeKannada NewsKarnataka News

*ಬೆಳಗಾವಿಯಲ್ಲಿ ಎರಡು ಕಡೆ ಮಟಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ*; *ನಾಲ್ವರು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನಗರದಲ್ಲಿ ಅಕ್ರಮ ಮಟಕಾ ದಂಧೆ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಪೊಲೀಸರು, ಎರಡು ಪ್ರತ್ಯೇಕ ಸ್ಥಳಗಳಲ್ಲಿ ಮಟಕಾ ಅಡ್ಡೆಗಳ ಮೇಲೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ನವೆಂಬರ್ 20ರಂದು ಶಹಾಪೂರ ಪೊಲೀಸ್ ಠಾಣೆ ಹಾಗೂ ಮಾಳಮಾರುತಿ ಪೊಲೀಸ್ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆ ನಡೆಸಿದ್ದಾರೆ.

ಶಹಾಪೂರ ಠಾಣೆ ಪೊಲೀಸರ ದಾಳಿ:

ಶಹಾಪೂರ ಪೊಲೀಸ್ ಠಾಣೆಯ ಪಿಎಸ್‌ಐ ಹೊನ್ನಪ್ಪ ತಳವಾರ ನೇತೃತ್ವದಲ್ಲಿ ಸಿಬ್ಬಂದಿ ಮರಗಮ್ಮ ಗಲ್ಲಿ, ಖಾಸಬಾಗದ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮವಾಗಿ ಅಂಕಿ-ಸಂಖ್ಯೆಗಳ ಮೇಲೆ ಹಣ ಹಚ್ಚಿಕೊಂಡು ಮಟಕಾ ಆಡುತ್ತಿದ್ದ ಸಂತೋಷ ನಾರಾಯಣ ಕನುಕಲಿ (53) ಹಾಗೂ ಶುಭಂ ಸಂತೋಷ ಕನುಕಲಿ ಸಿಕ್ಕಿಬಿದ್ದಿದ್ದಾರೆ.

ಆರೋಪಿತರಿಂದ 2,380 ರೂ. ನಗದು ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿಚಾರಣೆ ವೇಳೆ ಮಟಕಾ ಮೂಲಕ ಸಂಗ್ರಹಿಸಿದ ಹಣವನ್ನು ಗಜಾನನ ಗರಡ ಎಂಬಾತನಿಗೆ ನೀಡುತ್ತಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ಮೂವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 143/2026ರ ಅಡಿಯಲ್ಲಿ ಕೆ.ಪಿ. ಕಾಯ್ದೆಯ ಕಲಂ 78(3)ರಂತೆ ಪ್ರಕರಣ ದಾಖಲಿಸಲಾಗಿದೆ.

ಮಾಳಮಾರುತಿ ಠಾಣೆ ಪೊಲೀಸರ ದಾಳಿ:

ಇನ್ನೊಂದೆಡೆ, ಪಿಎಸ್‌ಐ ಆನಂದ ಆದಗೊಂಡ ನೇತೃತ್ವದಲ್ಲಿ ಮಾಳಮಾರುತಿ ಠಾಣೆಯ ಪೊಲೀಸರು ಯಮುನಾಪೂರ ಗ್ರಾಮದ ಕೊಲ್ಲಾಪುರ ಹೋಟೆಲ್ ಸಮೀಪ ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿದ್ದಾರೆ.

ಈ ವೇಳೆ ಯಮುನಾಪೂರದ ಹೊಳೆಪ್ಪ ಶಂಕರ ಗಸ್ತಿ (32) ಹಾಗೂ ಕಂಗ್ರಾಳಿಯ ಪಾಟೀಲ ಗಲ್ಲಿಯ ಅರ್ಜುನ ಪರಶುರಾಮ ಕೋಳಿ ಅಕ್ರಮವಾಗಿ ಮಟಕಾ ಆಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇವರಿಂದ 7,420 ರೂ. ನಗದು ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 253/2026ರ ಅಡಿಯಲ್ಲಿ ಕೆ.ಪಿ. ಕಾಯ್ದೆಯ ಕಲಂ 78(3)ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಎರಡೂ ಠಾಣೆಗಳ ಪೊಲೀಸರ ಕಾರ್ಯಾಚರಣೆಯಲ್ಲಿ ಒಟ್ಟು 9,800 ರೂ. ನಗದು ಹಾಗೂ ಮಟಕಾ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ನಡೆಸಿದ ಪಿಎಸ್‌ಐಗಳು ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿಗಳು ಶ್ಲಾಘಿಸಿದ್ದಾರೆ.

Related Articles

Back to top button