Belagavi NewsBelgaum NewsKannada NewsKarnataka NewsNational

*ನಕಲಿ ಔಷಧ ವಿರುದ್ಧ ಬೆಳಗಾವಿಯಲ್ಲಿ ಕರವೇ ಆಕ್ರೋಶ*

ವಿವಾ ಫಾರ್ಮಾ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯಾದ್ಯಂತ ನಕಲಿ ಔಷಧಗಳ ಪತ್ತೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಬೆನ್ನಲ್ಲೇ, ಬೆಳಗಾವಿಯಲ್ಲೂ ನಕಲಿ ಔಷಧ ಮಾರಾಟದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ನೇತೃತ್ವದಲ್ಲಿ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ, ವಿವಾ ಫಾರ್ಮಾ ಕಚೇರಿ ಮುಂದೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ನಕಲಿ ಔಷಧಗಳ ಮಾರಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಪರಿಶೀಲನೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜನರ ಆರೋಗ್ಯದೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು. ನಕಲಿ ಔಷಧ ಮಾರಾಟದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮೆಡಿಕಲ್ ಶಾಪ್‌ಗಳಲ್ಲಿ ಮಾರಾಟವಾಗುತ್ತಿರುವ ಔಷಧಗಳ ಗುಣಮಟ್ಟ ಹಾಗೂ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮ ಕಂಡುಬಂದಲ್ಲಿ ಪರವಾನಗಿ ರದ್ದುಪಡಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ನಕಲಿ ಔಷಧ ಮಾರಾಟಕ್ಕೆ ಕಡಿವಾಣ ಹಾಕಿ, ಸಾರ್ವಜನಿಕರ ಆರೋಗ್ಯ ರಕ್ಷಣೆ ಮಾಡಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಆಗ್ರಹವಾಗಿದೆ.

Related Articles

Back to top button