*ದುಬೈನಲ್ಲಿ ಉಡುಪಿ ಮೂಲದ ವ್ಯಕ್ತಿಯ ಬರ್ಬರ ಹತ್ಯೆ: 9 ತುಂಡು ಮಾಡಿ ಕಾರಿನ ಡಿಕ್ಕಿಯಲ್ಲಿ ಹಾಕಿದ ದುಷ್ಕರ್ಮಿಗಳು!*

ಪ್ರಗತಿವಾಹಿನಿ ಸುದ್ದಿ: ದುಬೈನ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉಡುಪಿ ಮೂಲದ ಪ್ರಕಾಶ್ ಕುಂದರ್ ಜುಲೈ ತಿಂಗಳಲ್ಲಿ ಹತ್ಯೆಯಾಗಿದ್ದು, ಅವರ ಮೃತದೇಹವನ್ನು 9 ತುಂಡುಗಳಾಗಿ ಮಾಡಿ ಅವರದ್ದೇ ಕಾರಿನ ಡಿಕ್ಕಿಯಲ್ಲಿ ತುಂಬಲಾಗಿತ್ತು ಎಂದು ತಿಳಿದುಬಂದಿದೆ. ಘಟನೆ ಬೆಳಕಿಗೆ ಬಂದಿರುವುದು ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.
ಪ್ರಕಾಶ್ ಕುಂದರ್ ಶಾರ್ಜಾದಲ್ಲಿ ಪತ್ನಿ ಟೀನಾ ಹಾಗೂ ಅಪ್ರಾಪ್ತ ವಯಸ್ಸಿನ ಪುತ್ರನೊಂದಿಗೆ ವಾಸವಾಗಿದ್ದರು ಎನ್ನಲಾಗಿದೆ. ಹತ್ಯೆಯ ಬಳಿಕ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಘಟನೆಯಲ್ಲಿ ಪತ್ನಿಯ ಪಾತ್ರವಿದೆಯೇ ಅಥವಾ ಇತರರ ನೆರವಿನಿಂದ ಕೃತ್ಯ ನಡೆದಿದೆಯೇ ಎಂಬ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಪತ್ನಿ ಹಾಗೂ ಪುತ್ರ ಭಾರತಕ್ಕೆ ಬಂದಿರುವ ಸಾಧ್ಯತೆಯ ಬಗ್ಗೆಯೂ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಶಾರ್ಜಾ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣದ ಸಂಪೂರ್ಣ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ.
ಜುಲೈ 20ರಂದು ಪ್ರಕಾಶ್ ಅವರ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದರು. ಸಾಮಾನ್ಯವಾಗಿ ಪ್ರಕಾಶ್ ವಾಯ್ಸ್ ಮೆಸೇಜ್ ಮೂಲಕ ಪ್ರತಿಕ್ರಿಯಿಸುತ್ತಿದ್ದರು. ಆದರೆ ಅಂದು ಟೆಕ್ಸ್ಟ್ ಮೆಸೇಜ್ ಮೂಲಕ ಮಾತ್ರ ಪ್ರತಿಕ್ರಿಯಿಸಿದ್ದರು. ಬಳಿಕ ಕುಟುಂಬಸ್ಥರು ಕರೆ ಮಾಡುವಂತೆ ಒತ್ತಾಯಿಸಿದ ನಂತರ ಸಂಪರ್ಕ ಕಡಿತಗೊಂಡಿತ್ತು ಎನ್ನಲಾಗಿದೆ.
ಇದರಿಂದ ಆತಂಕಗೊಂಡ ಕುಟುಂಬಸ್ಥರು ಪ್ರಕಾಶ್ ಕೆಲಸ ಮಾಡುತ್ತಿದ್ದ ಕಂಪನಿಯನ್ನು ಸಂಪರ್ಕಿಸಿದ್ದರು. ಅವರು ಭಾರತಕ್ಕೆ ತೆರಳಿದ್ದಾರೆ ಎಂದು ಕಂಪನಿ ತಿಳಿಸಿತ್ತು. ಆದರೆ ಪ್ರಕಾಶ್ ಭಾರತಕ್ಕೆ ಬಂದಿರುವುದು ದೃಢವಾಗದ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ಹುಡುಕಾಟ ನಡೆಸಿದ ವೇಳೆ ಪ್ರಕಾಶ್ ಅವರ ಕಾರಿನ ಡಿಕ್ಕಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಕರಣದ ತನಿಖೆಯನ್ನು ಶಾರ್ಜಾ ಪೊಲೀಸರು ಮುಂದುವರಿಸಿದ್ದಾರೆ.




