ನಿನಾದ ಗೃಹ ಸಂಗೀತ: ಪಂಡಿತ್ ಎಂ.ಪಿ. ಹೆಗಡೆ, ಪಡಿಗೆರೆ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ
ಪ್ರಗತಿವಾಹಿನಿ ಸುದ್ದಿ, ಮೈಸೂರು: ‘ನಿನಾದ ಗೃಹ ಸಂಗೀತ’, ನಗರದ ಕೇರ್ಗಳ್ಳಿಯಲ್ಲಿ ನಡೆಯುವ ಸಂಗೀತ ಕಛೇರಿ ಸರಣಿಯ ೧೮ನೆಯ ಕಾರ್ಯಕ್ರಮ ಆಗಸ್ಟ್ ೧೬ ರಂದು, ಭಾನುವಾರ ಸಂಜೆ ೬ ಗಂಟೆಗೆ, #೩೭ ‘ನಿನಾದ’, ರಿಷಭ್ ಸಿದ್ಧಿ ಲೇಔಟ್, ಕೇರ್ಗಳ್ಳಿ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಗ್ವಾಲಿಯರ್ ಘರಾಣೆಯ ಹಿರಿಯ ಸಂಗೀತಗಾರರಾದ ಪಂ.ಎಂ.ಪಿ. ಹೆಗಡೆ, ಪಡಿಗೆರೆ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದೆ. ಇವರಿಗೆ ತಬಲಾದಲ್ಲಿ ಭೀಮಾಶಂಕರ್ ಬಿದನೂರ್ ಹಾಗೂ ಹಾರ್ಮೋನಿಯಂನಲ್ಲಿ ಪಂ. ವೀರಭದ್ರಯ್ಯ ಹಿರೇಮಠ ಅವರುಗಳು ಸಹಕರಿಸಲಿದ್ದಾರೆ.
ಪಂ.ಎಂ.ಪಿ. ಹೆಗಡೆಯವರು ಶಿರಸಿ ಬಳಿಯ ಪಡಿಗೆರೆಯವರು. ಸಾಂಸ್ಕೃತಿಕ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿದ ಇವರು, ತಂದೆಯವರಿಂದ ಸಂಗೀತದ ಆಸಕ್ತಿಯನ್ನು ಬೆಳೆಸಿಕೊಂಡು, ಮುಂದೆ ಆ ಭಾಗದ ಹಿರಿಯ ಸಂಗೀತಗಾರರಾಗಿದ್ದ ಪಂ.ಆರ್.ಟಿ.ಹೆಗಡೆ ಶೀಗೇಹಳ್ಳಿ ಅವರಲ್ಲಿ ಹಲವಾರು ದಶಕಗಳ ಕಾಲ ವಿದ್ಯಾಭ್ಯಾಸ ಮಾಡಿದರು. ೧೯೭೯ರಲ್ಲಿ ಕರ್ನಾಟಕ ಸರಕಾರ ನಡೆಸುವ ವಿದ್ವತ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ೧೯೮೦ರಲ್ಲಿ ಗಂಧರ್ವ ಮಹಾ ಮಂಡಲ ನಡೆಸುವ ಸಂಗೀತ ಅಲಂಕಾರ ಪರೀಕ್ಷೆಯಲ್ಲೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದರು. ಆಕಾಶವಾಣಿಯ ಕಲಾವಿದರೂ ಆದರು.
ಗುರುಗಳಾದ ಆರ್.ಟಿ.ಹೆಗಡೆಯವರ ಮಾರ್ಗದರ್ಶನದಲ್ಲಿ ಖ್ಯಾಲ್ ಸಂಗೀತ ಮಾತ್ರವಲ್ಲದೆ ಠುಮ್ರಿ, ಟಪ್ಪಾ ಗಾಯನಗಳಲ್ಲೂ ಸಿದ್ಧ ಹಸ್ತರಾದರು. ಗ್ವಾಲಿಯರ್ ಶೈಲಿಯ ಇವರ ಗಾಯನದಲ್ಲಿ ಮೇಳೈಸುವ ಆಲಾಪ, ಖಚಿತವಾಲ ಲಯಕಾರಿ, ಮೀಂಡ್, ಸರಳ-ಸಪಾಟ್ ತಾನ್ಗಳು, ರಾಗ ದರ್ಶನವನ್ನು ಮಾಡಿಸುವಂತ ಬಂದಿಶ್ನ್ನು ಮುಂದಿಡುವ ವೈಖರಿ ಇವುಗಳೆಲ್ಲಾ ಎಂ.ಪಿ.ಹೆಗಡೆಯವರನ್ನು ಚಿಂತನಶೀಲ ಗಾಯಕರನ್ನಾಗಿ ರೂಪಿಸಿವೆ.ತಾವು ಪದವಿ ಶಿಕ್ಷಣವನ್ನು ಮುಗಿಸಿಕೊಂಡು, ಪ್ರಬುದ್ಧ ಗಾಯಕರಾಗಿ ರೂಪುಗೊಳ್ಳುತ್ತಿರುವ ಹೊತ್ತಿನಲ್ಲಿ ಶ್ರೇಷ್ಠ ಗುರುಗಳೆನಿಸಿದ ಧಾರವಾಡದ ಪಂ.ಚಂದ್ರಶೇಖರ ಪುರಾಣಿಕಮಠ ಗುರುಗಳ ಸಂಪರ್ಕ, ಮಾರ್ಗದರ್ಶನ ಅವರಿಗೆ ದೊರಕಿತು, ಮಾತ್ರವಲ್ಲ ಈ ಅವಕಾಶ ಅವರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಿತು, ಅವರ ಗಾಯನಕ್ಕೆ ಹೊಸ ಮೆರುಗು ಬಂದಿತು.
ಸಂಗೀತವನ್ನೇ ಜೀವಸೆಲೆಯಾಗಿ ಇಟ್ಟುಕೊಂಡು ಅಪ್ರತಿಮ ಸಾಧನೆ, ಅಸಾಧಾರಣ ತಾಳ್ಮೆಯಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡಿದ ಅಪರೂಪದ ಗುರು ಇವರು. ಶ್ರೀ ಸತ್ಯಸಾಯಿ ಆರಾಧಕರಾಗಿ ೧೯೮೧ರಲ್ಲಿ ‘ಶ್ರೀ ಸಾಯಿ ಸಂಗೀತ ವಿದ್ಯಾಲಯ’ವನ್ನು ಪ್ರಾರಂಭಿಸಿ ಆಸಕ್ತ ವಿದ್ಯಾರ್ಥಿಗಳಿಗೆ ಕಲಿಸುವುದರ ಮೂಲಕ ಕಲೆಯ ಪ್ರಸಾರವನ್ನು ಕಳೆದ ೪೫ ವರ್ಷಗಳಿಂದ ಮಾಡುತ್ತಿದ್ದಾರೆ, ತಮ್ಮ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ಅವರ ಬಳಿ ಕಲಿತ ಅನೇಕರು ನಾಡಿನಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಪ್ರಚಾರ-ಪ್ರಸಿದ್ಧಿಯ ಕಡೆಗೆ ಕಿಂಚಿತ್ತೂ ಗಮನ ನೀಡದೆ, ಸಂಗೀತದ ಉಪಾಸನೆಯಲ್ಲಿ ತೊಡಗಿರುವ ಇವರನ್ನು ಅರಸಿಕೊಂಡು ಹಲವಾರು ಪ್ರಶಸ್ತಿ-ಪುರಸ್ಕಾರಗಳು ಬಂದಿವೆ. ಕಲಾವಿದರಾಗಿ, ಉತ್ತಮ ಗುರುವಾಗಿ, ಸಂಗೀತಜ್ನರಾಗಿ, ಸಜ್ಜನ-ಸರಳ ಗಾಯಕರಾಗಿ ದೊಡ್ಡ ಗೌರವಕ್ಕೆ ಪಾತ್ರರಾಗಿರುವವರು, ಪಂ.ಎಂ.ಪಿ.ಹೆಗಡೆ.
ಇವರಿಗೆ ತಬಲಾದಲ್ಲಿ ಸಹಕರಿಸಲಿರುವ ಭೀಮಾಶಂಕರ ಬಿದನೂರ್ ಅವರು ಮೈಸೂರಿನ ಉತ್ತಮ ತಬಲಾ ವಾದಕರು. ಗದುಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು, ನಾಡಿನ ಅನೇಕ ಹೆಸರಾಂತ ಕಲಾವಿದರಿಗೆ ಸಾಥ್ ನೀಡಿದ್ದಾರೆ.ಹಾರ್ಮೋನಿಯಂನಲ್ಲಿ ಸಹಕರಿಸಲಿರುವ ಪಂ.ವೀರಭದ್ರಯ್ಯ ಹಿರೇಮಠ್ ಅವರು ಮೈಸೂರಿನ ಹಿರಿಯ ಗುರುಗಳು, ಗಾಯಕರು, ಹಾರ್ಮೋನಿಯಂ ವಾದಕರು. ಗುರು ಪರಮಪೂಜ್ಯ ಪುಟ್ಟರಾಜ ಗವಾಯಿಗಳವರ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸ ಮಾಡಿ ಮೈಸೂರಿನಲ್ಲಿ ಆಸಕ್ತರಿಗೆ ವಿದ್ಯಾದಾನ ಮಾಡುತ್ತಿದ್ದಾರೆ.ಕೇರ್ಗಳ್ಳಿಯ ‘ನಿನಾದ ಸಂಗೀತ ಶಾಲೆ’ಯ ವಿದ್ಯಾರ್ಥಿ ಬಳಗದ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮ ನಡೆಯುವ ವಿಳಾಸ#೩೭, ‘ನಿನಾದ’, ರಿಷಭ್ ಸಿದ್ಧಿ ಲೇಔಟ್, ಕೇರ್ಗಳ್ಳಿ, ಮೈಸೂರು. ಸಂಪರ್ಕ ೯೪೪೯೬೭೬೦೧೪
Pragativahini News, MYSURU: A Hindustani classical vocal concert by Pandit M.P. Hegde of Padigere will be held in Mysuru on August 16 as part of the ‘Ninaada Griha Sangeeta’.
The concert will begin at 6 pm at ‘Ninaada’, Rishabh Siddhi Layout, Kergalli.
Hegde, a musician from the Gwalior gharana, will perform khayal, thumri and tappa. He will be accompanied by Bhimashankar Bidanur on tabla and Pandit Veerabhadrayya Hiremath on harmonium.
Hegde, from Padigere near Sirsi, learnt music from his father and later trained under Pandit R.T. Hegde Shigehalli for several decades. He secured the first rank in the Karnataka government’s Vidwat examination in 1979 and completed the Sangeet Alankar examination conducted by Gandharva Mahavidyalaya in 1980. He has also been an All India Radio artiste.
He later received guidance from Pandit Chandrashekar Puranikmath of Dharwad. Hegde started the Sri Sai Sangeetha Vidyalaya in 1981 and has been teaching music for the past 45 years.
Tabla artiste Bhimashankar Bidanur has trained at the Veereshwara Punyashrama in Gadag and has accompanied several musicians. Harmonium artiste Veerabhadrayya Hiremath is a senior musician and teacher in Mysuru and trained under Pandit Puttaraj Gawai.
The programme is being organised with the participation of students of the Ninaada Music School, Kergalli.
Venue: No. 37, ‘Ninaada’, Rishabh Siddhi Layout, Kergalli, Mysuru.
Contact: 9449676014.




