ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಪಂಪನನ್ನು ಸಮಕಾಲೀನ ವಿದ್ಯಮಾನಗಳ ಜೊತೆಗೆ ಜೋಡಿಸುವ ಪ್ರಕ್ರಿಯೆ ಅವನ ಕಾವ್ಯಗಳನ್ನು ಅಧ್ಯಯನಿಸಿದಾಗ ತಿಳಿಯುತ್ತದೆ. ಇಂದಿನ ಎಲ್ಲ ರಾಜಕೀಯ, ಸಾಮಾಜಿಕ ಸನ್ನಿವೇಶಗಳು ಹಾಗೂ ಸಾಂಸ್ಕೃತಿಕ ರಾಜಕಾರಣಗಳು ಪಂಪನ ಕಾವ್ಯದಲ್ಲಿ ಸಹಜವಾಗಿ ಅಭಿವ್ಯಕ್ತಿಯಾಗಿವೆ. ಪಂಪನನ್ನು ಸಮಕಾಲೀನವಾಗಿ ನೋಡುವ ದೃಷ್ಟಿಕೋನವು ಓದುಗನಲ್ಲಿ ಬೆಳೆಯಬೇಕು. ಇದು ನಿರಂತರ ಅಧ್ಯಯನಶೀಲತೆಯಿಂದ ಹಾಗೂ ಕಾವ್ಯ ಪ್ರೀತಿಯಿಂದ ಸಾಧ್ಯವಾಗುತ್ತದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ ಅಭಿಪ್ರಾಯಪಟ್ಟರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಪಂಪ ಭಾರತ ಮತ್ತು ಗದಾಯುದ್ಧ ಕಾವ್ಯಗಳಲ್ಲಿ ರಸ ಪ್ರಸಂಗಗಳು ವಿಷಯ ಕುರಿತು ಕನ್ನಡ ಸಂಘದ ವತಿಯಿಂದ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಪಂಪನು ಒಂದುವೇಳೆ ಪ್ರಾದೇಶಿಕ ಭಾಷೆಯಲ್ಲಿ ಕಾವ್ಯವನ್ನು ಬರೆಯದೇ ಜಾಗತಿಕ ಮನ್ನಣೆ ಇರುವ ಭಾಷೆಯಲ್ಲಿ ಕಾವ್ಯವನ್ನು ರಚಿಸದ್ದರೆ ಪಂಪನು ಏರಿದ ಎತ್ತರ ಎಷ್ಟೆಂಬುದು ತಿಳಿಯುತ್ತಿತ್ತು. ಡಾಂಟೆ, ಮಿಲ್ಟನ್ ಮುಂತಾದ ಜಾಗತಿಕ ನೆಲೆಯ ಮಹಾಕವಿಗಳ ಸಮವರ್ತಿಯಾಗಿ ನಿಲ್ಲುವ ಸಾಮಥ ಅವನಲ್ಲಿರುವುದು ವಾಸ್ತವ ಸಂಗತಿಯೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ. ಎಸ್.ಎಂ. ಗಂಗಾಧರಯ್ಯ, ಮಹಾಭಾರತದಲ್ಲಿ ಅದರಲ್ಲೂ ಪಂಪಭಾರತದಲ್ಲೂ ಕರ್ಣ ಪಾತ್ರದ ತೊಡಕಿನ ಸಂಕೀರ್ಣತೆಯ ವಿಶ್ವರೂಪವನ್ನು ಅನಾವರಣಗೊಳಿಸಿದರು.
ಕನ್ನಡ ಸಂಘದ ಸಂಯೋಜಕಿ ಡಾ. ಶೋಭಾ ನಾಯಕ ಆಯೋಜಿಸಿ ನಿರೂಪಿಸಿದರು. ಡಾ. ಮಹೇಶ ಗಾಜಪ್ಪನವರು, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಪಿ. ನಾಗರಾಜ, ಡಾ. ಅಶೋಕ ಮುಧೋಳ, ಸಂಶೋಧನಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ವಿಭಾಗದ ಬೋಧಕೇತರ ಸಿಬ್ಬಂದಿ ಹಾಜರಿದ್ದರು.