Latest

ಪೊಲೀಸ್ ಇಲಾಖೆಯ ಮಾದರಿಯಲ್ಲಿಯೇ ಅಬಕಾರಿ ರಕ್ಷಕರಿಗೂ ಬಡ್ತಿಗೆ ಕ್ರಮ : ಎಚ್. ಡಿ. ಕುಮಾರಸ್ವಾಮಿ


   ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ

ಪೊಲೀಸ್ ಇಲಾಖೆಯ ಮಾದರಿಯಲ್ಲಿಯೇ ಅಬಕಾರಿ ಇಲಾಖೆಯಲ್ಲಿನ ಅಬಕಾರಿ ರಕ್ಷಕರಿಗೂ ಬಡ್ತಿ ನೀಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಕಟಿಸಿದರು.
ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಹಾಗೂ ಹುಬ್ಬಳ್ಳಿ- ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಜಗದೀಶ ಶೆಟ್ಟರ ಅವರ ಪ್ರಶ್ನೆಗೆ ಉತ್ತರಿಸಿದ ಕುಮಾರ ಸ್ವಾಮಿ ಅವರು ಅಬಕಾರಿ ಇಲಾಖೆಯ ವಿವಿಧ ವೃಂದಗಳಲ್ಲಿ ೫೪೮೫ ಹುದ್ದೆಗಳು ಮಂಜೂರಾಗಿವೆ. ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈ ಪೈಕಿ ೨೯೦೧ ಹುದ್ದೆಗಳನ್ನು ಭರ್ತಿಮಾಡಲಾಗಿದೆ. ೨೫೮೪ ಹುದ್ದೆಗಳು ಖಾಲಿ ಉಳಿದಿವೆ ಎಂದು ತಿಳಿಸಿದರು.
ಖಾಲಿ ಉಳಿದಿರುವ ಹುದ್ದೆಗಳನ್ನು ಕರ್ನಾಟಕ ಅಬಕಾರಿಗಳ ಸೇವೆಗಳ ನೇಮಕಾತಿ ನಿಯಮಾವಳಿ ಅನುಸಾರ ಬಡ್ತಿ ಮತ್ತು ನೇರ ನೇಮಕಾತಿ ಮೂಲಕ ಭರ್ತಿಮಾಡಬೇಕಾಗಿದೆ. ಬಿ. ಕೆ ಪವಿತ್ರ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಇರುವುದರಿಂದ ಬಡ್ತಿ ನೀಡುವ ಪ್ರಕ್ರಿಯೆ ವಿಳಂಬವಾಗಿದೆ. ಆದರೆ ನೇರ ನೇಮಕಾತಿ ಪ್ರಕ್ರಿಯೆಗಳು ಎಂದಿನಂತೆ ನಡೆಯತ್ತಿವೆ ಎಂದು ಹೇಳಿದರು.
೨೦೧೧ರಲ್ಲಿ ಕರ್ನಾಟಕ ಲೋಕಸೇವಾ ಆಯೋಗ ನೇಮಕಗೊಳಿಸಿದ ಅಬಕಾರಿ ಉಪ ಅಧೀಕ್ಷಕರ ಆರು ಹುದ್ದೆಗಳ ಆಯ್ಕೆ ಕುರಿತಂತೆ ನ್ಯಾಯಾಲಯದಲ್ಲಿ ತಕರಾರು ಸಲ್ಲಿಕೆಯಾಗಿರುವ ಕಾರಣ ತೀರ್ಪಗೆ ಕಾಯಲಾಗಿದೆ.
೨೦೧೭ರಲ್ಲಿ ಅಬಕಾರಿ ಉಪ ಅಧೀಕ್ಷಕರ ಐದು ಹುದ್ದೆಗೆ ಕರ್ನಾಟಕ ಲೋಕಸೇವಾ ಆಯೋಗವು ಲಿಖಿತ ಪರೀಕ್ಷೆ ನಡಿಸಿದೆ. ಹಾಗೂ ೧೭೭ ಅಬಕಾರಿ ಉಪನಿರೀಕ್ಷಕರ ಹುದ್ದೆಗಳು ಹಾಗೂ ೧೦೦೩ ಅಬಕಾರಿ ರಕ್ಷಕರ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದೆ. ಹೊಸದಾಗಿ ೫೯ ಅಬಕಾರಿ ಉಪನಿರೀಕ್ಷಕರ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಅಲ್ಲದೆ, ೩೧ ಪ್ರಥಮ ದರ್ಜೆ ಸಹಾಯಕರು, ಬೆರಳಚ್ಚುಗಾರರ ಎರಡು ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗವು ಕ್ರಮವಹಿಸಿದೆ ಜಿಲ್ಲಾಮಟ್ಟದ ಆಯ್ಕೆ ಸಮಿತಿ ಮೂಲಕ ೧೮೩ ವಾಹನ ಚಾಲಕರ ನೇಮಕಾತಿ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಇಲಾಖೆಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಚಾಲಕರಾಗಿ ಕೆಲಸ ಮಾಡುತ್ತಿರುವ ಸೇವೆಯನ್ನು ಖಾಯಂಗೊಳಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿಲ್ಲ. ಆದರೆ ನೇಮಕಾತಿಯಲ್ಲಿ ಸೇವಾ ನಿರತ ಚಾಲಕರಿಗೆ ಆಯ್ಕೆಯಲ್ಲಿ ಆದ್ಯತೆ ನೀಡಲು ಕ್ರಮವಹಿಸಲಾಗುವುದು ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button