ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ಕೊಹಿನಾ ಜಲಾಶಯದಿಂದ ಕರ್ನಾಟಕ ರಾಜ್ಯದ ಕೃಷ್ಣಾ ನದಿಗೆ ಪ್ರತಿವರ್ಷ ಬೇಸಿಗೆಯಲ್ಲಿ 4 ಟಿಎಮ್‌ಸಿ ನೀರು ಹರಿಸಬೇಕು ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ನೇತೃತ್ವದ ನಿಯೋಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಒತ್ತಾಯಿಸಿದೆ.
ಮಂಗಳವಾರ ಮುಂಬಯಿ ಮಹಾನಗರದ ಮುಖ್ಯಮಂತ್ರಿಗಳ ಅಧಿಕೃತ ಸಚಿವಾಲಯದಲ್ಲಿ ಭೇಟಿಯಾದ ನಿಯೋಗ, ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ರಾಯಬಾಗ, ಅಥಣಿ ಮತ್ತು ಬಾಗಲಕೋಟ ಜಿಲ್ಲೆಯಲ್ಲಿ ಕೃಷ್ಣಾ ನದಿಯು ಬರಿದಾಗುವುದರಿಂದ ಈ ಭಾಗದ ಜನರು ತೊಂದರೆಗೊಳಗಾಗುತ್ತಾರೆ. ಹಾಗಾಗಿ ಪ್ರತಿ ವರ್ಷ 4 ಟಿಎಂಸಿ ನೀರು ಬಿಡುವುದರಿಂದ ಈ ಭಾಗದ ರೈತರಿಗೆ, ರೈತರ ಜಮೀನುಗಳಿಗೆ ಕುಡಿಯುವ ನೀರಿಗಾಗಿ ಜನ-ಜಾನುವಾರುಗಳಿಗೆ ಅನುಕೂಲವಾಗುವುದು ಎಂದು ಮನವರಿಕೆ ಮಾಡಿತು.
ಮಹಾರಾಷ್ಟ್ರ ರಾಜ್ಯದಿಂದ ಪ್ರತಿ ವರ್ಷ4 ಟಿಎಮ್‌ಸಿ ನೀರನ್ನು ಬಿಡಲು ಮತ್ತು ನಮ್ಮ ರಾಜ್ಯದ ತುಬಚಿ ಬಬಲೇಶ್ವರ ಏತ ನೀರಾವರಿಯಿಂದ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಕೆಲವು ಭಾಗಗಳಿಗೆ ಮತ್ತು ಆಲಮಟ್ಟಿ ಜಲಾಶಯದಿಂದ ಇಂಡಿ ಬ್ರ್ಯಾಂಚ್ ಕೆನಾಲದಿಂದ ಸೊಲ್ಲಾಪುರ ತಾಲೂಕಿನ ಅಕ್ಕಲಕೋಟ ಹಾಗೂ ಕೆಲವು ಭಾಗಗಳಿಗೆ ಕುಡಿಯುವ ನೀರು ಕೊಡುವುದು. ಹೀಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳಲು ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ನೀರಾವರಿ ಸಚಿವರ ಮತ್ತು ಅಧಿಕಾರಿಗಳ ಸಭೆ ಕರೆಯಬೇಕು ಎಂದೂ ನಿಯೋಗ ಒತ್ತಾಯಿಸಿತು.
ಒಪ್ಪಿದ ಫಡ್ನವೀಸ್
ನಿಯೋಗದ ಮನವಿಗೆ ಒಪ್ಪಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರು ಮತ್ತು ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ಕರೆದು ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ಹಿತದೃಷ್ಟಿಯಿಂದ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳಲು ಕ್ರಮಕೈಗೊಳ್ಳುವಂತೆ ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು ಎಂದು ನಿಯೋಗದಲ್ಲಿದ್ದ ಕರ್ನಾಟಕ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.
ಸಾಂಗಲಿ ಜಿಲ್ಲೆಯ ಲೋಕಸಭಾ ಸದಸ್ಯ ಸಂಜಯ (ಕಾಕಾ) ಪಾಟೀಲ ಈ ಸಂದರ್ಭದಲ್ಲಿದ್ದರು.
ಮಹಾಂತೇಶ ಕವಟಗಿಮಠ ಅವರು ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ