ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
’ಮಹಿಳಾ ದಿನಾಚರಣೆಯು ಕೇವಲ ಒಂದೇ ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ ಮಹಿಳೆಯರ ದಿನವನ್ನಾಗಿ ಪರಿಗಣಿಸಬೇಕು’ ಎಂದು ಬೆಳಗಾವಿ ರಾಣಿ ಚನ್ಮಮ್ಮ ವಿಶ್ವವಿದ್ಯಾಲಯದ ಗಣಕಯಂತ್ರ ವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ಮಲ್ಲಮ್ಮ ವಿ. ರೆಡ್ಡಿ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಮಹಿಳಾ ಸಂಘ ಹಾಗೂ ಪರಂಪರೆ ಕೂಟ ಇವುಗಳ ಆಶ್ರಯದಲ್ಲಿ ಶುಕ್ರವಾರ ಆಚರಿಸಿದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹೆಣ್ಣು ಮತ್ತು ಗಂಡು ಎನ್ನುವ ತಾರತಮ್ಯವು ಮನೆಯಿಂದ ಬಂದಿದ್ದು, ಅಂಥ ತಾರತಮ್ಯವು ವ್ಯಾಪಕವಾಗಿ ಹರಡಿದೆ. ನಾರಿಶಕ್ತಿ ಎನ್ನುವುದು ಅಪೂರ್ವವಾಗಿದ್ದು, ಪ್ರತಿ ಮಹಿಳೆಯು ಆತ್ಮವಿಶ್ವಾಸದಿಂದ ತನ್ನ ವ್ಯಕ್ತಿತ್ವವನ್ನು ಬೆಳೆಸಿಕೊಂಡಾಗ ಜಗತ್ತು ನಿಮ್ಮನ್ನು ನೋಡುತ್ತದೆ ಎಂದರು.
ಪ್ರಥಮ ಮಹಿಳಾ ವೈದ್ಯೆ ಆನಂದಿ ಗೋಪಾಲ ಮತ್ತು ಶಿಕ್ಷಣ ಕ್ರಾಂತಿ ಮಾಡಿದ ಸಾವಿತ್ರಿಭಾಯಿ ಫುಲೆ ಅವರಿಂದಾಗಿ ಮಹಿಳೆಯು ಇಂದು ದಿಟ್ಟವಾಗಿ ನಿಲ್ಲುವ ಶಕ್ತಿ ಪಡೆದುಕೊಂಡಿದ್ದಾಳೆ. ಪ್ರೀತಿ, ವಾತ್ಸಲ್ಯ, ಕರುಣೆ, ನೋವು ಇವುಗಳಿಗೆ ಇನ್ನೊಂದು ಹೆಸರು ತಾಯಿ. ತಾಯಿಯ ಸ್ಪರೂಪಳಾಗಿರುವ ಮಹಿಳೆಗೆ ಬೆಲೆ ಕಟ್ಟಲಾಗದು. ಪುರುಷ ಮತ್ತು ಮಹಿಳೆ ಸಮನಾಗಿ ಬಾಳಿದರೆ ಸಮಾಜವು ಉನ್ನತದತ್ತ ಸಾಗುತ್ತದೆ ಎಂದರು.
ಅತಿಥಿ ಸಂಸ್ಥೆಯ ನಿರ್ದೇಶಕ ವೆಂಕಟೇಶ ಸೋನವಾಲ್ಕರ ಮಾತನಾಡಿ ಮಹಿಳೆಯು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು, ಅವಳಿಗೆ ಪ್ರಧಾನ್ಯತೆ ದೊರೆಯಬೇಕು ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ನಿರ್ದೇಶಕ ಎಂ.ಎಚ್. ಸೋನವಾಲ್ಕರ್ ಮಾತನಾಡಿ ಮಹಿಳೆಯ ಬೆಳೆವಣಿಗೆಗೆ ಸಮಾಜದಲ್ಲಿ ಇಂದು ಸಾಕಷ್ಟು ಅವಕಾಶಗಳು ಇದ್ದು, ಅಂಥ ಅವಕಾಶಗಳನ್ನು ಪಡೆದುಕೊಂಡು ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಪರಂಪರೆ ಕೂಟದ ಅಧ್ಯಕ್ಷ ಪ್ರೊ.ಎಸ್.ಜಿ. ನಾಯ್ಕ, ಶಿಲ್ಫಾ ಭಾಗೋಜಿ ಮಹಿಳೆ ದಿನ ಕುರಿತು ಮಾತನಾಡಿದರು.
ಪ್ರಾಚಾರ್ಯ ಡಾ.ಆರ್. ಎ. ಶಾಸ್ತ್ರೀಮಠ ಸ್ವಾಗತಿಸಿದರು, ಶಿಲ್ಪಾ ನಾಯಿಕ ಪರಿಚಯಿಸಿದರು, ಸುಶ್ಮೀತಾ ನಾಯಿಕ, ಅಶ್ವಿನಿ ಬಡಿಗೇರ, ಯಶೋಧಾ ತರಕಾರ, ಲಕ್ಷ್ಮೀ ಪೂಜೇರ ನಿರೂಪಿಸಿದರು.