ಗೋರಖ್ ಪುರ್(ಉತ್ತರಪ್ರದೇಶ):
ಸಣ್ಣ ರೈತರಿಗೆ ವಾರ್ಷಿಕ 6 ಸಾವಿರ ರೂ. ನೀಡುವ ಕೇಂದ್ರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ಚಾಲನೆ ನೀಡಿದರು.
5 ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ. ರೈತರ ಅಕೌಂಟಿಗೆ ಕಂತಿನಲ್ಲಿ ನೇರವಾಗಿ ಹಣ ಜಮೆಯಾಗಲಿದ್ದು, ಮಾರ್ಚ್ 31ರೊಳಗೆ ಮೊದಲ ಕಂತು ಜಮಾ ಆಗಲಿದೆ. ಈ ಯೋಜನೆಯ ಪ್ರಯೋಜನ ಸುಮಾರು 12 ಕೋಟಿ ರೈತರಿಗೆ ಸಿಗಲಿದೆ. ಈ ಯೋಜನೆಯಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ 75 ಸಾವಿರ ಕೋಟಿ ರೂ ಹೆಚ್ಚಿನ ಹೊರೆ ಬೀಳಲಿದೆ. ಇದು ನಿಮ್ಮ ಹಕ್ಕು ಎಂದು ಮೋದಿ ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೈ ಜವಾನ್, ಜೈ ಕಿಸಾನ್ ನನಸು ಮಾಡಬೇಕಿದೆ. ರೈತರ ಪಾಲಿನ ಅತಿ ದೊಡ್ಡ ಯೋಜನೆ ಇದಾಗಿದೆ. ಇದನ್ನು ಮೋದಿಯಾಗಲಿ, ರಾಜ್ಯ ಸರ್ಕಾರದವರಾಗಲಿ ಕಸಿಯಲು ಸಾಧ್ಯವಿಲ್ಲ. ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಿಂದ ಶೇ.67ರಷ್ಟು ಅರ್ಜಿ ರವಾನೆಗೊಂಡಿದೆ. ಯುಪಿ, ಉತ್ತರಾಖಂಡ್, ಬಿಹಾರ ರಾಜ್ಯಗಳು ಈಗಾಗಲೇ ಸಣ್ಣ ರೈತರ ಮಾಹಿತಿಯನ್ನು ನೀಡಿವೆ. ಉಳಿದ ರಾಜ್ಯಗಳು ರಾಜಕೀಯ ಮಾಡುತ್ತಿವೆ. ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಪ್ರಧಾನಿ ಹೇಳಿದರು.
ಈ ಹಿಂದಿನ ಸರ್ಕಾರದಲ್ಲಿ ರೈತರಿಗೆ ಸಿಗಬೇಕಿದ್ದ 1 ರು ನಲ್ಲಿ 15 ಪೈಸೆ ಮಾತ್ರ ಸಿಗುತ್ತಿತ್ತು. ಈಗ ರೈತರಿಗೆ ಸಿಗಬೇಕಾದ ಪೂರ್ಣ ಮೊತ್ತ ಯಾವುದೇ ಮಧ್ಯವರ್ತಿಗಳ ಕಾಟವಿಲ್ಲದೆ ನೇರವಾಗಿ ಖಾತೆಗೆ ತಲುಪುವ ವ್ಯವಸ್ಥೆ ಮಾಡಲಾಗಿದೆ ಎಂದರು.