ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ಸರಕಾರದ ವಿವಿಧ ಯೋಜನೆಗಳು ಅರ್ಹ ಬಡ ಫಲಾನುಭವಿಗಳಿಗೆ ತಲುಪಬೇಕಾಗಿದೆ ಎಂದು ಶಾಸಕ ಅನಿಲ ಎಸ್. ಬೆನಕೆ ಹೇಳಿದರು.
ನಗರ ಬಸ್ ನಿಲ್ದಾಣದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಫೆ.೨೪ ರಿಂದ ಹಮ್ಮಿಕೊಳ್ಳಲಾದ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಫಲಕಗಳ ಪ್ರದರ್ಶನ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು.
ಸರಕಾರ ಜಾರಿಗೆ ತರುವ ಯೋಜನೆಗಳು ಮಾಹಿತಿ ಕೊರತೆಯಿಂದ ಕೆಳಹಂತದ ಅರ್ಹ ಫಲಾನುಭವಿಗಳಿಗೆ ತಲುಪದೆ ವಿಫಲವಾದ ನಿದರ್ಶನಗಳಿವೆ. ಈ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜನರ ಅನುಕೂಲಕ್ಕಾಗಿ ಜನನಿಬಿಡ ಸ್ಥಳಗಳಲ್ಲಿ ಸರಕಾರದ ಹಲವಾರು ಯೋಜನೆಗಳ ಬಗ್ಗೆ ವಸ್ತು ಪ್ರದರ್ಶನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ರಾಜ್ಯದ ಮೈತ್ರಿ ಸರಕಾರ ಜಾರಿಗೆ ತಂದಿರುವ ಹಲವಾರು ಅಭಿವೃದ್ಧಿ ಯೋಜನೆಗಳಾದ ಬಡವರ ಬಂಧು, ಅಮೃತ ಯೋಜನೆ, ಹಸಿರು ಕರ್ನಾಟಕ, ಜನತಾ ದರ್ಶನ, ಋಣಮುಕ್ತ ಪರಿಹಾರ ಕಾಯ್ದೆ, ಬೆಳೆ ಸಮೀಕ್ಷೆ, ಶಾಲಾ ಕಾಲೇಜುಗಳಿಗೆ ಮೂಲ ಸೌಕರ್ಯ, ದಿಶಾ, ಬಡ್ಡಿ ರಹಿತ ಸಾಲ ನೀಡುವ ಕಾಯಕ ಯೋಜನೆ, ಅವಕಾಶ ವಂಚಿತರ ಅಭ್ಯುದಯಕ್ಕೆ ಮಹಾಹೆಜ್ಜೆ, ಕೈಗಾರಿಕಾ ಕ್ಲಸ್ಟರ್ ಯೋಜನೆ, ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ, ಆಧುನಿಕ ಕೃಷಿ ಯೋಜನೆ, ಆಯುಷ್ಮಾನ್ ಭಾರತ ಕರ್ನಾಟಕ ಸೇರಿದಂತೆ ವಿವಿಧ ಯೋಜನೆಗಳ ಆಕರ್ಷಕ ಫಲಕಗಳ ಮಾಹಿತಿಗಳು ನೆರೆದ ಶಾಲಾ ಮಕ್ಕಳು, ಸಾರ್ವಜನಿಕರ ಗಮನ ಸೆಳೆದವು.