ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಹಾಗಾಗಿ ದುಡ್ಡು, ಸರಾಯಿ, ಸಾಮಗ್ರಿಗಳಿಗೆ ತಮ್ಮ ಮತ ಮಾರಿಕೊಳ್ಳದೆ ದೇಶದ ಭವಿಷ್ಯಕ್ಕಾಗಿ ನೈತಿಕ ಮತದಾನ ಮಾಡಬೇಕು ಎಂದು ಜಿಲ್ಲಾ ಸ್ಟೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ಟೀಪ್ ಸಮಿತಿ ವತಿಯಿಂದ ಹೆಚ್ಚಿನ ಮತದಾನವನ್ನು ಕೈಗೊಳ್ಳುವ ಉದ್ದೇಶದಿಂದ ಮತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ಕೇಂದ್ರ ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಶನಿವಾರ ಸ್ಥಾಪಿಸಲಾದ ಮತದಾನ ಪ್ರಾತ್ಯಕ್ಷಿಕ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವ ಸಮುದಾಯವೇ ನವಭಾರತದ ಶಿಲ್ಪಿಗಳು. ಆದ್ದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕೆಂದರು.
ವಿಕಲಚೇತನ ಅಂತರಾಷ್ಟ್ರೀಯ ಈಜು ಪಟುವಾದ ರಾಘವೇಂದ್ರ ಅಣ್ವೇಕರ ಅವರು ಮಾತನಾಡಿ ಕ್ರೀಡೆಯಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ಎಷ್ಟು ಮುಖ್ಯವೊ ಅದೆ ರೀತಿ ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ಅಷ್ಟೇ ಮುಖ್ಯ ಎಂದರು.
ಯೋಗ್ಯರಲ್ಲದವರಿಗೆ ನಿಮ್ಮ ಮತ ಚಲಾಯಿಸಿ ವ್ಯರ್ಥ ಮಾಡದೆ ಯೊಚಿಸಿ ನಿರ್ಧರಿಸಿ ಮತದಾನ ಮಾಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಉಸ್ತುವಾರಿಯನ್ನು ಜಿಲ್ಲಾ ಪಂಚಾಯತ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ವಹಿಸಿದ್ದರು
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಇಬ್ರಾಹಿಮ್ ಮೈಗೂರ, ತಾಲ್ಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಪದ್ಮಜಾ ಪಾಟೀಲ, ಜಿಲ್ಲಾ ವೈದ್ಯಾಧಿಕಾರಿ ಅಪ್ಪಾಸಾಹೇಬ ನರಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನೀರ್ದೇಶಕ ಸೀಬಿರಂಗಯ್ಯ, ಜಿಲ್ಲಾ ಸ್ಟೀಪ್ ಸಮಿತಿಯ ಸಹಾಯಕ ಅಧಿಕಾರಿ ರವಿ ಭಜಂತ್ರಿ, ಶಿಕ್ಷಣ ಅಧಿಕಾರಿ ಬಿ.ಎಚ್ ಮಿಲ್ಲಾನಟ್ಟಿ, ಜಿಲ್ಲೆಯ ಎಲ್ಲ ಹಿರಿಯ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.