ಪ್ರಗತಿವಾಹಿನಿ ಸುದ್ದಿ, ಬಾಗಲಕೋಟೆ
ಪಾಕಿಸ್ತಾನದಲ್ಲಿ ಜನರು ಸತ್ತರೆ ಇಲ್ಲಿನ ಕೆಲವು ಜನರು ಅಳುತ್ತಾರೆ. ಕೆಲವರಿಗೆ ಬಾಲಕೋಟ್ ಅಥವಾ ಬಾಗಲಕೋಟ್ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.
ಬಾಗಲಕೋಟೆಯಲ್ಲಿ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡುತ್ತಿರುವ ಅವರು, ನಮ್ಮ ಸೈನಿಕರು ಪಾಕಿಸ್ತಾನ ನಿದ್ದೆ ಮಾಡುತ್ತಿರುವಾಗ ದಾಳಿ ನಡೆಸಿದರು. 5 ಗಂಟೆಗೆ ಎದ್ದು ಪಾಕಿಸ್ತಾನ ಟ್ವೀಟ್ ಮಾಡಿ ದಾಳಿ ನಡೆದಿದೆ ಎಂದು ಹೇಳಿತು. ಆದರೆ ಇಲ್ಲಿನ ಕೆಲವರು ಬಾಗಲಕೋಟೆಯನ್ನೇ ಬಾಲಾಕೋಟ್ ಎಂದರು. ಕಾಂಗ್ರೆಸ್ ಮತ್ತು ಜೆಡಿಎಸ್ ವೋಟ್ ಬ್ಯಾಂಕ್ ಬಾಗಲಕೋಟೆಯಲ್ಲಿದೆಯೇ?, ಬಾಲಾಕೋಟ್‌ನಲ್ಲಿದೆಯೇ? ಅದಕ್ಕೆ ಇಲ್ಲಿನ ಮುಖ್ಯಮಂತ್ರಿ ಬಾಲಾಕೋಟ್ ಏರ್ ಸ್ಟ್ರೈಕ್ ಬಗ್ಗೆ ಮಾತನಾಡುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಮ್ಮ ಸಾಧನೆ. ಆದರೆ, ಇದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲು ಸಿದ್ಧವಿಲ್ಲ ಎಂದು ಕಿಡಿಕಾರಿದರು.
ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂದು ಹೇಳುತ್ತಿದ್ದಾರೆ. ಇಂತಹ ಹೇಳಿಕೆ ನೀಡುವವರಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ದೇಶಕ್ಕೆ ಇಬ್ಬರು ಪ್ರಧಾನಿಗಳು ಬೇಕೆ? ಎಂದು ಮೋದಿ ಪ್ರಶ್ನಿಸಿದರು.
ಗಡಿಯನ್ನು ದಾಟಿ ಭಯೋತ್ಪಾದಕರಿಗೆ ನಮ್ಮ ಸರ್ಕಾರ ಉತ್ತರ ನೀಡಿದೆ. ಇದಕ್ಕೆಲ್ಲಾ ಕಾರಣವಾಗಿರುವುದು ನಿಮ್ಮ ಬೆಂಬಲ. ಎಲ್ಲದರಲ್ಲೂ ಲೂಟಿ ಮಾಡಲು ಕಾಂಗ್ರೆಸ್ ಬಯಸುತ್ತದೆ. ಹೆಲಿಕಾಪ್ಟರ್, ಕಾಮನ್‌ವೆಲ್ತ್, ಕಲ್ಲಿದ್ದಲು, 2ಜಿ ಎಲ್ಲದರಲ್ಲೂ ಅವರು ಲೂಟಿ ಮಾಡಿದರು. ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿ ಇದ್ದರು. ಈಗ ಕರ್ನಾಟಕದಲ್ಲಿ ಅಂತಹ ಮುಖ್ಯಮಂತ್ರಿ ಇದ್ದಾರೆ. ಮುಖ್ಯಮಂತ್ರಿ ಅಳುತ್ತಾರೆ. ಈ ಸರ್ಕಾರ ಎಷ್ಟು ದಿನ ಉಳಿಯುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಆದ್ದರಿಂದ, ನಿಮ್ಮ ಹಣದಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಈ ನಾಟಕದಲ್ಲಿ ಕರ್ನಾಟಕದಲ್ಲಿ ಅಭಿವೃದ್ಧಿ ಕಾರ್ಯಗಳು ಹಿಂದೆ ಉಳಿದಿವೆ. ಸಾಲಮನ್ನಾ ಏನಾಯಿತು?. ಕಾಂಗ್ರೆಸ್‌ಗೆ ಇಂತಹ ಸರ್ಕಾರ, ಇಂತಹ ಮುಖ್ಯಮಂತ್ರಿಯೇ ಇಷ್ಟವಾಗುತ್ತಾರೆ. ಇಂತಹ ಪ್ರಧಾನಿಯನ್ನೇ ಅವರು ಬಯಸುತ್ತಿದ್ದಾರೆ ಎಂದರು ಮೋದಿ.
ಕರ್ನಾಟಕದ ಹಲವಾರು ನೀರಾವರಿ ಯೋಜನೆಗಳಿಗೆ ನಾವು ಸಹಾಯ ಮಾಡಲು ಸಿದ್ದರಿದ್ದೇವೆ. ಆದರೆ ಇಲ್ಲಿನ ಸರಕಾರಕ್ಕೆ ಅದು ಬೇಡವಾಗಿದೆ. ಲೋಕಸಭಾ ಚುನಾವಣೆಯಲ್ಲಿ ನೀವು ನೀಡುವ ಬೆಂಬಲ ಇಲ್ಲಿನ ಸರ್ಕಾರದ ಮೇಲೂ ಉಂಟಾಗಲಿದೆ ಎಂದು ಅವರು ಹೇಳಿದರು.
ಅರ್ಧ ಗಂಟೆಗಳಿಗೂ ಹೆಚ್ಚು ಸಮಯ ನಿರರ್ಗಳವಾಗಿ ಮಾತನಾಡಿದ ಮೋದಿ ಇದೀಗ ಅಲ್ಲಿಂದ ಚಿಕ್ಕೋಡಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ