Latest

ಬಾಲಚಂದ್ರ ಜಾರಕಿಹೊಳಿಗೆ ಎರಡು ಹೊಣೆ ವಹಿಸಿದ ಯಡಿಯೂರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ  ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನಿವಾಸದಲ್ಲಿ ಸಭೆ ನಡೆಸಿದರು.ಪ್ರಗತಿವಾಹಿನಿ ಸುದ್ದಿ, ಗೋಕಾಕ :

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸುವ ಮತ್ತು ಲೋಕಸಭಾ ಚುನಾವಣೆಯ ನಂತರ ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತರುವ ಸಂಬಂಧ ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾಜಿ ಸಚಿವ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ಸೂಚಿಸಿದ್ದಾರೆ.

ಸುರೇಶ ಅಂಗಡಿ ಪರ ಪ್ರಚಾರಕ್ಕೆಂದು ಗೋಕಾಕ ನಗರಕ್ಕೆ ಯಡಿಯೂರಪ್ಪ ಬಂದಿದ್ದ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಮನೆಯಲ್ಲಿ ಗುಪ್ತ ಸಭೆ ನಡೆಯಿತು. ಈ ವೇಳೆ ಶಾಸಕರು ಹಲವಾರು ಸಲಹೆಗಳನ್ನು ನೀಡಿದರು.

ಸುರೇಶ ಅಂಗಡಿ ಅವರ ವಿರುದ್ಧ ಹಲವೆಡೆ ಅಸಮಾಧಾನವಿದೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಮುಂದೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂದೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಎದುರಿಸುತ್ತಿರುವ ಪ್ರಶ್ನೆಗಳು ಹಾಗೂ ಉತ್ತರಿಸಲು ತಮಗಾಗುತ್ತಿರುವ ಮುಜುಗರದ ಕುರಿತು ವಿವರಿಸಿದರು. ಸಂಸದರು ಕಾರ್ಯಕರ್ತರನ್ನು ನಿರ್ಲಕ್ಷಿಸಬಾರದು. ಕ್ಷೇತ್ರದಲ್ಲಿ ಓಡಾಡಿ ಜನರ ಸಮಸ್ಯೆ ಆಲಿಸಬೇಕು. ನಾವು ಕೇವಲ ಮೋದಿ ಹೆಸರು ಹೇಳಿ ಮತ ಕೇಳುವಂತಾಗಿದೆ. ಶಾಸಕರ ಜೊತೆಗೂ ಸಂಸದರು ನಿರಂತರವಾಗಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.

ಎಲ್ಲವನ್ನೂ ಆಲಿಸಿದ ಯಡಿಯೂರಪ್ಪ ಈ ಸಂಬಂಧ ಸುರೇಶ ಅಂಗಡಿಗೆ ಸೂಕ್ತ ಸೂಚನೆಗಳನ್ನು ನೀಡಿದರು.

ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸವದತ್ತಿ ಶಾಸಕ ಆನಂದ ಮಾಮನಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ ಅವರು ಸುರೇಶ ಅಂಗಡಿ ಅವರ ಗೆಲುವಿಗೆ ರೂಪಿಸಿರುವ ಅಂಶಗಳನ್ನು ಯಡಿಯೂರಪ್ಪ ಅವರ ಗಮನಕ್ಕೆ ತಂದರು. ಈ ಬಾರಿ 2 ಲಕ್ಷದಷ್ಟು ಭಾರೀ ಅಂತರದ ಗೆಲುವಿಗೆ ಅವಕಾಶವಿದೆ  ಎಂದು ಹೇಳಿದರು.

ಇದೇ ವೇಳೆ, ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನಗೊಳಿಸಿ ಬಿಜೆಪಿ ಸರಕಾರ ತರುವ ಕುರಿತೂ ಚರ್ಚೆ ನಡೆಯಿತು. ಲೋಕಸಭಾ ಚುನಾವಣೆ ನಂತರ ಹಾದಿ ಸುಗಮವಾಗಲಿದೆ. ಕಳೆದ ಬಾರಿಯ ಪ್ರಯತ್ನದಲ್ಲಾಗಿರುವ ತಪ್ಪುಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಬೇಕು. ಕಾಂಗ್ರೆಸ್ ನಿಂದ ಮುನಿಸಿಕೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಅವರನ್ನು ಬಳಸಿಕೊಂಡು ಸ್ಪಷ್ಟ ಯೋಜನೆ ರೂಪಿಸಬೇಕು ಎಂದು ಚರ್ಚಿಸಲಾಗಿದೆ.

ಈ ಕುರಿತು ಯೋಜನೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಬಾಲಚಂದ್ರ ಜಾರಕಿಹೊಳಿ ಹೆಗಲಿಗೆ ವಹಿಸಲಾಗಿದ್ದು, ಶಾಸಕ ಉಮೇಶ ಕತ್ತಿ ಜೊತೆಗೂ ಇದೇ ವೇಳೆ ದೂರವಾಣಿಯಲ್ಲಿ ಯಡಿಯೂರಪ್ಪ ಚರ್ಚಿಸಿದರು ಎಂದು ಗೊತ್ತಾಗಿದೆ.

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಹಾಗೂ ಎಲ್ಲ ಪರಿಚಿತರಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button