ಪ್ರಗತಿವಾಹಿನಿ ಸುದ್ದಿ, ನವದೆಹಲಿ
ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ನಾಗರಿಕ ವಿಮಾನ ಯಾನ ಸಚಿವ ಸುರೇಶ್ ಪ್ರಭು ಅವರನ್ನು ಭೇಟಿಯಾಗಿ ರಾಜ್ಯದ ವಿವಿಧ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕುರಿತು ಚರ್ಚಿಸಿದರು.
ಕಲಬುರಗಿ ವಿಮಾನ ನಿಲ್ದಾಣದ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ವಿವಿಧ ವಿಮಾನ ಯಾನ ಕಂಪೆನಿಗಳು ಕಾರ್ಯಾಚರಣೆ ಆರಂಭಿಸಲು ಉತ್ಸಾಹ ತೋರಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸೂಚನೆಯಂತೆ ವಿಶೇಷ ಉದ್ದೇಶ ವಾಹಕ (ಎಸ್‍ಪಿವಿ)ದ ರಚನೆಯ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಅಗತ್ಯ ಪರವಾನಗಿ ಹಾಗೂ ತಾಂತ್ರಿಕ ಅನುಮತಿಗಳನ್ನು ಪಡೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಎಸ್‍ಪಿವಿ ರಚನೆಯಾಗುವ ವರೆಗೆ ಕಾಯದೆ, ಕೂಡಲೇ ಕಲಬುರಗಿ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಈ ಎಸ್‍ಪಿವಿ ಮೂಲಕ ರಾಜ್ಯ ಸರ್ಕಾರವು ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ವಿಜಯಪುರ ಮತ್ತು ಕಾರವಾರಗಳಲ್ಲಿಯೂ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ ಎಂದು ಅವರು ವಿವರಿಸಿದರು.
ಬೀದರ್ ವಿಮಾನ ನಿಲ್ದಾಣ ನಿರ್ಮಾಣ ಪೂರ್ಣಗೊಂಡು ಕಾರ್ಯಾಚರಣೆಗೆ ಸಜ್ಜಾಗಿದ್ದು, ಈ ಕುರಿತು ಜಿಹೆಚ್‍ಈಎಎಲ್‍ನೊಂದಿಗೆ ಪರಸ್ಪರ ಒಪ್ಪಂದ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಒಪ್ಪಂದ ಸಹಿ ಮಾಡುವಂತೆ ಸಂಬಂಧಿತರಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.
ಭಾರತೀಯ ವಾಯುಪಡೆಯು ಬೆಂಗಳೂರಿನ ಯಲಹಂಕದಲ್ಲಿರುವ ತನ್ನ ಹೆಲಿಕಾಪ್ಟರ್ ತರಬೇತಿ ವಿಭಾಗವನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಸ್ಥಳಾಂತರಿಸಲು ಪ್ರಸ್ತಾವನೆ ಸಲ್ಲಿಸಿದೆ. ಪುಣೆ, ಶ್ರೀನಗರ, ಚಂಡೀಘಢ ವಿಮಾನ ನಿಲ್ದಾಣಗಳ ಮಾದರಿಯಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು ಸಹ ತನ್ನದೇ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿ, ನಾಗರಿಕರ ಬಳಕೆ ಹಾಗೂ ಮಿಲಿಟರಿ ಬಳಕೆಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸಮ್ಮತಿಸಿದೆ. ಇದರಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಮೇಲಿನ ಒತ್ತಡ ಸ್ವಲ್ಪ ಮಟ್ಟಿಗೆ ಕಡಿಮೆಯಾಗುವುದು.
ರಾಜ್ಯ ಸರ್ಕಾರವು ಈ ಸ್ಥಳಾಂತರಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ್ದು, ಮೈಸೂರು ವಿಮಾನ ನಿಲ್ದಾಣ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸ್ವಾಧೀನದಲ್ಲಿದ್ದು, ಅವರೇ ಕಾರ್ಯಾಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಗೆ ಮೈಸೂರು ವಿಮಾನ ನಿಲ್ದಾಣವನ್ನು ಅವರ ಹೆಲಿಕಾಪ್ಟರ್ ಬೇಸ್‍ಗೆ ಬಳಸಿಕೊಳ್ಳಲು ಅನುಮತಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ