Latest

ಬೆಳಗಾವಿಯಲ್ಲಿ ಕಾಂಗ್ರೆಸ್ ಗೆ ಹಲವು ಆಕಾಂಕ್ಷಿಗಳು

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೋರಿ ಹಲವರು ಗುರುವಾರ ಮನವಿ ಸಲ್ಲಿಸಿದ್ದಾರೆ.

ಪಕ್ಷದ ವರಿಷ್ಠರಾದ ಮಾಣಿಕ್ಕಂ ಠಾಕೂರ್ ಹಾಗೂ ವಿಶ್ವನಾಥ ಆಕಾಂಕ್ಷಿಗಳಿಂದ ಅಹವಾಲು ಆಲಿಸಿದ್ದು, ಅನೇಕರು ಚುನಾವಣೆ ಕಣಕ್ಕಿಳಿಯುವ ಇಂಗಿತ ವ್ಯಕ್ತಪಡಿಸಿದರು. ಮಾಜಿ ಶಾಸಕರಾದ ಅಶೋಕ ಪಟ್ಟಣ, ಫಿರೋಜ್ ಸೇಠ್, ಬಿಎಂಟಿಸಿ ಮಾಜಿ ಅಧ್ಯಕ್ಷ ನಾಗರಾಜ ಯಾದವ, ಮಾಜಿ ಸಂಸದ ಎಸ್.ಬಿ.ಸಿದ್ನಾಳ ಹಾಗೂ ಅವರ ಪುತ್ರ ಶಿವಕಾಂತ ಸಿದ್ನಾಳ್, ನಗರ ಕಾಂಗ್ರೆಸ್ ಅಧ್ಯಕ್ಷ ರಾಜು ಸೇಠ್ ಮೊದಲಾದವರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. 

ಅಶೋಕ ಪಟ್ಟಣ, ಕ್ಷೇತ್ರದಲ್ಲಿ ಅತಿ ಹೆಚ್ಚಿರುವ ಲಿಂಗಾಯತರಿಗೆ ಟಿಕೆಟ್ ನೀಡುವಂತೆ ಕೋರಿದರೆ, ಫಿರೋಜ್ ಸೇಠ್ ಮುಸ್ಲಿಂ ಅಭ್ಯರ್ಥಿಗೆ ನೀಡುವಂತೆ ವಿನಂತಿಸಿದರು. ನಾಗರಾಜ ಯಾದವ, ಜಿಲ್ಲೆಯ ಮೂರು ಕ್ಷೇತ್ರಗಳ ಪೈಕಿ ಬೆಳಗಾವಿಗೆ ಹಿಂದುಳಿದವರಿಗೆ ಟಿಕೆಟ್ ನೀಡಬೇಕು. ಕನ್ನಡ ಮತ್ತು ಮರಾಠಿ ಎರಡೂ ಭಾಷಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ತಮಗೆ ನೀಡಬೇಕು ಎಂದು ಅವರು ಕೋರಿದರು. ಮರಾಠಾ ಮಂಡಳ ಚೇರಮನ್ ರಾಜಶ್ರೀ ಹಲಗೇಕರ್ ಕೂಡ ನಾಗರಾಜ ಯಾದವ ಅವರಿಗೆ ಟಿಕೆಟ್ ನೀಡುವಂತೆ ವಿನಂತಿಸಿದರು. ಶಿವಕಾಂತ ಸಿದ್ನಾಳ ಅವರಿಗೆ ಟಿಕೆಟ್ ನೀಡುವಂತೆ ಎಸ್.ಬಿ.ಸಿದ್ನಾಳ ಕೋರಿದರು. 

ವಿಶೇಷವೆಂದರೆ, ಅಂತಿಮವಾಗಿ ನಿರ್ಧಾರ ಮಾಡುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೇರಿದಂತೆ ಪ್ರಮುಖರ್ಯಾರೂ ಅತ್ತ ಸುಳಿಯಲಿಲ್ಲ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button