ಅಂತರಾಷ್ಟ್ರೀಯ ಕುಸ್ತಿಪಟುಗಳಿಗೆ ಆಹ್ವಾನ- ಸಿದ್ಧತೆ ಆರಂಭಿಸಲು ಸಚಿವರ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಸಕ್ತ ಸಾಲಿನ ಪ್ರಥಮ ಕರ್ನಾಟಕ ಕುಸ್ತಿ ಹಬ್ಬ ಫೆಬ್ರವರಿ 8, 9 ಹಾಗೂ 10 ರಂದು ಬೆಳಗಾವಿಯಲ್ಲಿ ನಡೆಯಲಿದೆ.
ಕುಸ್ತಿ ಹಬ್ಬ ಏರ್ಪಡಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆ ನಡೆಯಿತು. ಕುಸ್ತಿ ಹಬ್ಬ ಏರ್ಪಡಿಸಲು ಯುಜನ ಸೇವೆ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಎರಡು ಕೋಟಿ ರೂಪಾಯಿ ಅನುದಾನ ನಿಗದಿಪಡಿಸಲಾಗಿದ್ದು, ಈಗಾಗಲೇ ಒಂದು ಕೋಟಿ ರೂಪಾಯಿ ಬಿಡುಗಡೆಗೊಂಡಿದೆ.
ಈ ಅನುದಾನವನ್ನು ಬಳಸಿಕೊಂಡು ಕುಸ್ತಿ ಹಬ್ಬವನ್ನು ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಅರಣ್ಯ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕುಸ್ತಿ ಪಟುಗಳನ್ನು ಆಹ್ವಾನಿಸಿ, ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ರಾಜ್ಯದ ಕುಸ್ತಿ ಪಟುಗಳಿಗೆ ಕಲಿಯುವ ಅವಕಾಶಗಳನ್ನು ಒದಗಿಸಬೇಕು. ಕುಸ್ತಿ ಹಬ್ಬದಲ್ಲಿ ಸ್ಥಳೀಯ ಕುಸ್ತಿಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ರಾಜ್ಯದಾದ್ಯಂತ ಸೂಕ್ತ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ಕುಸ್ತಿ ಹಬ್ಬ ಆಯೋಜನೆಗೆ ಸಮಯಾವಕಾಶ ಕಡಿಮೆ ಇರುವುದರಿಂದ ಸ್ವಾಗತ, ಪ್ರಚಾರ ಸೇರಿದಂತೆ ಎಲ್ಲ ಬಗೆಯ ಸಮಿತಿಗಳನ್ನು ಕೂಡಲೇ ರಚಿಸಿ ಕಾರ್ಯಾರಂಭಿಸಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಈ ಸಂದರ್ಭದಲ್ಲಿ ಅನುದಾನ ಹಂಚಿಕೆ ಬಗ್ಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಬಸವರಾಜ ಎಚ್. ಮತ್ತು ಸೀಬಿರಂಗಯ್ಯ ಅವರು ಮಾಹಿತಿ ನೀಡಿದರು.
ಲಭ್ಯವಿರುವ ಅನುದಾನವನ್ನು ಬಳಸಿಕೊಂಡು ದೂರದಿಂದ ಆಗಮಿಸುವ ಕುಸ್ತಿಪಟುಗಳು ಹಾಗೂ ತೀರ್ಪುಗಾರರಿಗೆ ಸೂಕ್ತ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಬೇಕು. ಸ್ಪರ್ಧಾಳುಗಳ ಊಟ, ವಸತಿಗೆ ಸಂಬಂಧಿಸಿದಂತೆ ಯಾವುದೇ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಸಮಯಾವಕಾಶ ಕಡಿಮೆ ಇರುವುದರಿಂದ ಕೂಡಲೇ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದರು.
ಕುಸ್ತಿ ಹಬ್ಬ ಆಯೋಜನೆ ಹಾಗೂ ವಿವಿಧ ವಿಭಾಗದ ಸ್ಪರ್ಧೆಗಳ ಕುರಿತು ಅಂತರಾಷ್ಟ್ರೀಯ ಕುಸ್ತಿಪಟು ಮತ್ತು ಕರ್ನಾಟಕ ರಾಜ್ಯ ಭಾರತೀಯ ಶೈಲಿಯ ಕುಸ್ತಿ ಸಂಘಧ ಅಧ್ಯಕ್ಷ ರತನಕುಮಾರ್ ಮಠಪತಿ ಅವರು ಮಾತನಾಡಿದರು.
ಸಂಸದ ಪ್ರಕಾಶ್ ಹುಕ್ಕೇರಿ, ಶಾಸಕರಾದ ಅಭಯ್ ಪಾಟೀಲ, ಲಕ್ಷ್ಮೀ ಹೆಬ್ಬಾಳಕರ್, ಅನಿಲ್ ಬೆನಕೆ, ಮೇಯರ್ ಬಸಪ್ಪ ಚಿಕ್ಕಲದಿನ್ನಿ, ಪೊಲೀಸ್ ಆಯುಕ್ತರಾದ ಡಾ.ಡಿ.ಸಿ.ರಾಜಪ್ಪ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ