ಸಂವಿಧಾನ ಅರ್ಥೈಸಿಕೊಂಡರೆ ತಾಯಿಯನ್ನು ಅರಿತುಕೊಂಡಂತೆ: ನ್ಯಾಯಮೂರ್ತಿ ನಾಗಮೋಹನ್ ದಾಸ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ತಾಯಿಯನ್ನು ಅರ್ಥ ಮಾಡಿಕೊಂಡ ಹಾಗೆ. ಆ ತಾಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುಂದೆ ಸಾಗಬೇಕು. ರಾಷ್ಟ್ರಗೀತೆ, ಲಾಂಛನ ನೀಡಿ ನಿಜವಾದ ಭಾರತದ ನಿರ್ಮಾಣ ಮಾಡಿದ್ದು ನಮ್ಮ ಸಂವಿಧಾನ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ ಹಾಗೂ ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ, ವಕೀಲರ ಸಂಘ ಹಾಗೂ ಸಮುದಾಯ ಕರ್ನಾಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನದಾಸ್ ಆಯೋಗದ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ(ಜ.೯) ನಡೆದ ‘ಸಂವಿಧಾನ ಓದು’ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಬಗ್ಗೆ ಮಾತನಾಡಿದ ನ್ಯಾಯಮೂರ್ತಿ ನಾಗಮೋಹನದಾಸ ಅವರು, ಕಳೆದ ೭೦ ವರ್ಷಗಳಿಂದ ನಾವು ಹೊಸ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಿಲ್ಲ. ಹೊಸ ಚಿಂತನೆಗಳು ಬಂದರೆ ನಮ್ಮ ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬಹುದು. ರಾಜಕೀಯ ಅಧಿಕಾರ ಎಂದರೆ ಕಾನೂನುಗಳನ್ನು ರಚನೆ ಮಾಡುವದು ಕಾನೂನುಗಳನ್ನು ಜಾರಿ ಮಾಡುವ ಅಧಿಕಾರ ಎಂದರು.
ಒಂದು ಕಾಲದಲ್ಲಿ ರಾಜಕೀಯ ಅಧಿಕಾರ ರಾಜರ ಕೈಯಲ್ಲಿ ಇತ್ತು; ಬಳಿಕ ಆ ಅಧಿಕಾರ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧೀನ ಬಂದಿದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ವ್ಯವಸ್ಥೆ ಜಾರಿ ಆದವು. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ನಿಯಮಗಳನ್ನು ಪಾಲನೆ ಮಾಡುವದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿ ಅದನ್ನು ನಾವು ಅರಿಯಬೇಕಿದೆ ಎಂದು ಹೇಳಿದರು.
ನಮಗೊಂದು ಸಂವಿಧಾನ ಬೇಕು, ಆ ಸಂವಿಧಾನದ ಮೂಲಕ ಅಧಿಕಾರ ಮುನ್ನಡೆಯಬೇಕು ಹಾಗಾಗಿ ಸಂವಿಧಾನ ಅರಿಯುವುದು ಮುಖ್ಯ. ರಾಷ್ಟ್ರಗೀತೆ, ರಾಷ್ಟ್ರ ಲಾಂಛನ ನೀಡಿ ನಿಜವಾದ ಭಾರತದ ನಿರ್ಮಾಣ ಆಗಿದ್ದು ಭಾರತದ ಸಂವಿಧಾನ ಜಾರಿ ಆದ ನಂತರ ಎಂದು ಹೇಳಿದರು.
ದೇಶದ ಎಲ್ಲಾ ಸಮುದಾಯದ ಜನರ ಜೀವನವನ್ನು ಉತ್ತಮ ಪಡಿಸಿದ್ದು ಭಾರತದ ಸಂವಿಧಾನ. ಜಾತಿ, ಭೇದ, ಲಿಂಗ ತಾರತಮ್ಯ ಮಾಡದೇ ಎಲ್ಲರಿಗೂ ಸಮಾನವಾದ ಹಕ್ಕು ನೀಡಿದ್ದು ಭಾರತದ ಸಂವಿಧಾನ. ಅಂತಹ ಸಂವಿಧಾನವನ್ನು ನಾವು ಯಾವಗಾದರೂ ಓದಿಕೊಂಡಿದ್ದಿವಾ ಎಂದು ಪ್ರಶ್ನೆ ಮಾಡಿದ್ರು.
ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ತಾಯಿಯನ್ನು ಅರ್ಥ ಮಾಡಿಕೊಂಡ್ಡ ಹಾಗೆ. ಆ ತಾಯಿ ಹಾಕಿ ಕೊಟ್ಟ ಮಾರ್ಗದಲ್ಲಿ ನಾವು ಮುಂದೆ ಸಾಗಬೇಕು. ಮಹಾತ್ಮ ಗಾಂಧಿ ಅವರ ಅಹಿಂಸಾ ಮಾರ್ಗ, ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ, ಬುದ್ದನ ಶಾಂತಿ ಮಾರ್ಗ ಹಾಗೂ ಬಸವಣ್ಣನವರ ಸಮಾನತೆಯ ಮಾರ್ಗದಿಂದ ಭಾರತದ ಸಂವಿಧಾನ ನಿರ್ಮಾಣ ಮಾಡಲು ಸಾದ್ಯವಾಗಿದೆ ಎಂದು ನಾಗಮೋಹನ್ ದಾಸ್ ಹೇಳಿದರು.
ಇದಕ್ಕಿಂತ ಮುಂಚೆ ಮಾತನಾಡಿದ ಜಿಲ್ಲಾ ನ್ಯಾಯಾಧೀಶ ರಾದ ಆರ್.ಜೆ. ಸತೀಶ ಸಿಂಗ್ ಅವರು, ನಮ್ಮ ದೇಶದ ಪ್ರತಿಯೊಬ್ಬ ನಾಗರಿಕರಿಗೆ ಸಂವಿಧಾನ ಗೊತ್ತಿರಬೇಕು. ಸಂವಿಧಾನವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು. ನಾವು ನಮ್ಮ ಜೀವನದ ಬಗ್ಗೆ ಅಷ್ಟೇ ಕಾಳಜಿ ವಹಿಸುತ್ತಿದ್ದೇವೆ ವಿನಃ ಮತ್ತೊಬ್ಬರ ಬಗ್ಗೆ ವಿಚಾರ ಮಾಡುತ್ತಿಲ್ಲ ಎಂದು ಹೇಳಿದರು.
ದೇಶದಲ್ಲಿ ಪ್ರತಿಭಟನೆ ಆದರೆ ಸಾಕು ಸಾರ್ವಜನಿಕ ಆಸ್ತಿ ಹಾನಿ ಮಾಡಲು ನಮ್ಮ ಜನ ಮುಂದಾಗುತ್ತಾರೆ. ನಮ್ಮ ಮಕ್ಕಳಿಗೆ ನಾವು ಮನೆಯಿಂದಲೆ ಸಂಸ್ಕೃತಿಯನ್ನು ಕಲಿಸಬೇಕು. ನಮ್ಮ ಮನೆಯನ್ನು ಮೊದಲು ನಾವು ಸರಿಪಡಿಸಿಕೊಳ್ಳಬೇಕು. ಸಂವಿಧಾನವನ್ನು ಪ್ರತಿಯೊಬ್ಬರು ಓದವುದು ನಮ್ಮ ಆದ್ಯ ಕರ್ತವ್ಯ ಎಂದು ಹೆಳಿದರು.
ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಡಾ.ರಾಜೇಂದ್ರ ಕೆ. ವಿ ಅವರು. ಒಬ್ಬ ನಾಗರಿಕನಿಗೆ ಅಧಿಕಾರಿಯನ್ನಾಗಿ ಮಾಡೊದು ಸಂವಿಧಾನ. ಸಂವಿಧಾನ ಕೆಲವರಿಗೆ ಮಾತ್ರ ಸಿಮೀತ ಆಗಿದೆ ಎಂಬ ತಪ್ಪು ಕಲ್ಪನೆ ಇದೆ ಎಂದರು.
ಸಂವಿಧಾನ ರಚನೆ ಮಾಡಲು ಅಂಬೇಡ್ಕರ್ ಅವರು ದೀರ್ಘವಾದ ಅಧ್ಯಯನ ಮಾಡಿ ಸಂವಿಧಾನ ರಚನೆ ಮಾಡಿದ್ದಾರೆ. ಆದರೆ ಅಷ್ಟು ವರ್ಷಗಳು ಕಳೆದರು ನಮ್ಮ ಜನರಿಗೆ ಸಂವಿಧಾನ ಅರ್ಥ ಮಾಡಿಕೊಳ್ಳಲು ಆಗಿಲ್ಲ. ನಾವೆಲ್ಲರೂ ಸಂವಿಧಾನದ ಏಜೇನ್ಸಿಗಳಾಗಬೇಕು ಮತ್ತು ಸಂವಿಧಾನದ ಚಾಂಪಿಯನ್ಸ್ ಆಗಬೇಕು ಎಂದು ಹೇಳಿದರು .
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅವರು, “ನಮಗೆ ಸಂವಿಧಾನ ಅರಿವು ಇಲ್ಲದೆ ಸಾಕಷ್ಟು ತಪ್ಪು ಮಾಡುತ್ತೇವೆ. ಮೂಲ ಸಂವಿಧಾನವನ್ನು ಬಹಳ ಜನರು ಇನ್ನುವರೆಗೆ ಓದಿಕೊಂಡಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ದೇಶದ ಭವಿಷ್ಯಕ್ಕಾಗಿ ಸಂವಿಧಾನದ ರಚನೆ ಮಾಡಲಾಗಿದೆ” ಎಂದು ಹೇಳಿದರು.
ಸಂವಿಧಾನದ ರಚನೆ ಮಾಡುವಾಗ ಸಾಮಾಜಿಕ ಸಮಸ್ಯೆಯನ್ನು ಮನಗಂಡು ಸಂವಿಧಾನದ ರಚನೆ ಮಾಡಲಾಗಿದೆ. ನಾವು ಮೂಲ ಸಂವಿಧಾನವನ್ನು ಓದಿಕೊಂಡರೆ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಾಧ್ಯ, ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ದೇಶವನ್ನು ಮುನ್ನಡೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಬೆಳಗಾವಿಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಡಾ. ಎ.ಬಿ. ಪುಂಡಲೀಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರರಾದ ಬಸವರಾಜ ವರವಟ್ಟಿ, ಸಂವಿಧಾನ ಓದು ಅಭಿಯಾನ ಸಮಿತಿಯ ಸದಸ್ಯರಾದ ಕೆ.ಎಚ್.ಪಾಟೀಲ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಡಾ. ಉಮಾ ಸಾಲಿಗೌಡರ ಮತ್ತಿತರರು ಉಪಸ್ಥಿತರಿದ್ದರು.
****
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ