ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ರೈತರಿಂದ ನೇರವಾಗಿ ಗ್ರಾಹಕರಿಗೆ ಮಾವು ತಲುಪಿಸುವ ಕಾರ್ಯವನ್ನು ತೋಟಗಾರಿಕಾ ಇಲಾಖೆ ಪ್ರತಿ ವರ್ಷ ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಐಹೊಳೆ ಹೇಳಿದರು.
ಮಂಗಳವಾರ ಮೇ.೨೮ ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕ್ಲಬ್ ರೋಡ್ ನ ಹ್ಯೂಮ್ ಪಾರ್ಕ್‌ನಲ್ಲಿ ಮೇ ೨೮ ರಿಂದ ಜೂನ್ ೬ ರವರೆಗೆ ಹತ್ತು ದಿನಗಳ ಕಾಲ ಆಯೋಜಿಸಿದ ಜಿಲ್ಲಾಮಟ್ಟದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಳಿಗೆಗಳನ್ನು ವೀಕ್ಷಣೆ ಮಾಡಿ ಮಾತನಾಡಿದರು.
ಕಿತ್ತೂರು, ಉಚಗಾಂವ್, ಬೆಳಗಾವಿ, ಧಾರವಾಡ, ಜೋಗ ಯಲ್ಲಾಪುರ ಸೇರಿದಂತೆ ವಿವಿಧ ಕಡೆಗಳಿಂದ ಬಂದಿರುವ ರೈತರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕೃಷಿ ಸ್ಥಾಯಿ ಸಮಿತಿಯ ಸದಸ್ಯರಾದ ಶಂಕರ ಮಾಡಲಗಿ, ಸ್ಟ್ಯಾಂಡಿಂಗ್ ಸಮಿತಿಯ ಸದಸ್ಯರಾದ ನಿಂಗಪ್ಪ ಅರಕೇರಿ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ರಾದ ರವೀಂದ್ರ ಹಕಾಟಿ, ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿಗಳಾದ ವಿ.ಎಚ್ ಲಿಂಗಡೆ, ಕೃಷಿ ಅಭಿವೃದ್ಧಿ ಸ್ಥಾಯಿ ಸಮಿತಿಯ ಸದಸ್ಯರಾದ ಗೋವಿಂದ ಕೊಪ್ಪದ ಹಾಗೂ ಮಾವು ಬೆಳೆಗಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ