ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿವಿಧ ಪಕ್ಷಗಳಲ್ಲಿ ಆಕಾಂಕ್ಷಿಗಳ ಸಾಲು ಬೆಳೆಯುತ್ತಿದೆ.
ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ನ್ಯಾಯವಾದಿ ಎ.ಜಿ.ಮುಳವಾಡಮಠ ಆಸಕ್ತರಾಗಿದ್ದು, ಪಕ್ಷದ ಹೈಕಮಾಂಡ್ ಕದ ತಟ್ಟಿದ್ದಾರೆ.

ನ್ಯಾಯವಾದಿಗಳ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ನ್ಯಾಯವಾದಿಗಳ ಪರಿಷತ್ ಅಧ್ಯಕ್ಷರಾಗಿ ಕೆಲಸ ಮಾಡಿರುವ ಮುಳವಾಡಮಠ ಮೂಲತಃ ಅಥಣಿ ತಾಲೂಕಿನ ಹಾಲಳ್ಳಿಯವರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯೂ ಸಕ್ರೀಯವಾಗಿ ಕೆಲಸ ಮಾಡಿದ್ದು, ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊದಿರುವುದಾಗಿ ತಿಳಿಸಿರುವ ಅವರು, ಲೋಕಸಭೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಕೋರಿದ್ದಾರೆ.
ಈ ಕುರಿತು ಪ್ರಗತಿವಾಹಿನಿಯೊಂದಿಗೆ ಮಾತನಾಡಿದ ಅವರು, ”ಕಳೆದ 32 ವರ್ಷಗಳಿಂದ ಸಾರ್ವಜನಿಕ ಕ್ಷೇತ್ರದಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ. 4-5 ಸಾವಿರ ನ್ಯಾಯವಾದಿಗಳು ನನ್ನ ಪರವಾಗಿ ಕೆಲಸ ಮಾಡಲು ಸಿದ್ದರಿದ್ದಾರೆ. ಬೆಳಗಾವಿ ಕ್ಷೇತ್ರದ ಜನರಿಗೆ ನಾನು ಚಿರಪರಿಚಿತನಿದ್ದೇನೆ. ಕ್ಷೇತ್ರಾದ್ಯಂತ ಲಕ್ಷಾಂತರ ಜನ ನನ್ನ ಕಕ್ಷಿದಾರರಿದ್ದಾರೆ, ಸಂಬಂಧಿಕರಿದ್ದಾರೆ. ಅಭಿಮಾನಿಗಳಿದ್ದಾರೆ. ಹಾಗಾಗಿ ನನಗೆ ಟಿಕೆಟ್ ನೀಡಿದರೆ ಖಂಡಿತ ಆಯ್ಕೆಯಾಗುತ್ತೇನೆ” ಎಂದರು.
”ಈಗಾಗಲೆ ಪಕ್ಷದ ಎಲ್ಲ ನಾಯಕರನ್ನೂ ಭೇಟಿಯಾಗಿ ನನಗೆ ಅವಕಾಶ ನೀಡುವಂತೆ ವಿನಂತಿಸಿದ್ದೇನೆ. ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ” ಎಂದು ಅವರು ತಿಳಿಸಿದರು.




