8 ರಿಂದ 10 ಸಂಸದೀಯ ಕಾರ್ಯದರ್ಶಿಗಳ ನೇಮಕ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಂಗಳವಾರ ಬೆಳಗಾವಿಯಲ್ಲಿ ನಡೆಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಆಹ್ವಾನಿಸಿಲ್ಲ. ಈ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ. ಇನ್ನೊಮ್ಮೆ ಕಾಂಗ್ರೆಸ್-ಜೆಡಿಎಸ್ ಜಂಟಿ ಶಾಸಕಾಂಗ ಸಭೆ ಕರೆಯಲಿದ್ದು, ಆಗ ಮುಖ್ಯಮಂತ್ರಿಗಳೂ ಇರುತ್ತಾರೆ ಎಂದು ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಲ್ ಪಿ ಸಭೆಯಲ್ಲಿ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸುವುದಿಲ್ಲ. ಅಧಿವೇಶನದ ನಂತರ ಜಂಟಿ ಸಭೆ ಕರೆಯುತ್ತೇವೆ. ಆ ಸಭೆಯಲ್ಲಿ ಸಿಎಂ, ಎಲ್ಲ ಸಚಿವರೂ, ಎರಡೂ ಪಕ್ಷಗಳ ಶಾಸಕರೂ ಇರುತ್ತಾರೆ ಎಂದರು.
ಸಂಪುಟ ವಿಸ್ತರಣೆ ಬಹುಪಾಲು ಡಿಸೆಂಬರ್ 22 ರಂದು ನಡೆಯಲಿದೆ. ಸಚಿವರು ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲ ಬದ್ಧರಾಗಿದ್ದೇವೆ. ಕಾಂಗ್ರೆಸ್ ನಲ್ಲಿ ಎಲ್ಲ ಆರೂ ಸ್ಥಾನ ತುಂಬುತ್ತೇವೆ. 30 ನಿಗಮ ಮಂಡಳಿ ಗಳ ಅಧ್ಯಕ್ಷರ ನೇಮಕವನ್ನೂ ಮಾಡುತ್ತೇವೆ. 20 ಕಾಂಗ್ರೆಸ್ ಗೆ, 10 ನಿಗಮ ಮಂಡಳಿ ಜೆಡಿಎಸ್ ಗೆ ನೀಡಲಾಗುವುದು. 8 ರಿಂದ 10 ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡುತ್ತೇವೆ. ದತ್ತಾತ್ರೇಯ ಜಯಂತಿಯಂದು ಸಂಪುಟ ವಿಸ್ತರಣೆ ಮಾಡಲಾಗುವುದು. ಅಂದು ಒಳ್ಳೆಯ ದಿನವಿದೆ ಎಂದ ಸಿದ್ದರಾಮಯ್ಯ,
ಶೂನ್ಯ ಮಾಸ ಅಂತ ಯಾರು ಹೇಳಿದ್ದು? ದತ್ತಾತ್ರೇಯ ಜಯಂತಿಗಿಂತ ಒಳ್ಳೇದಿನ ಸಿಗುತ್ತಾ? ಎಂದು ಪ್ರಶ್ನಿಸಿದರು.
ನಮ್ಮ ಯಾವ ಶಾಸಕರಲ್ಲೂ ಅತೃಪ್ತಿಯಿಲ್ಲ. ಬಿ. ಸಿ. ಪಾಟೀಲ್ ಮಗಳ ಮದುವೆಯಲ್ಲಿ ಬ್ಯುಸಿಯಾಗಿದ್ದಾರೆ. ಸುಧಾಕರ್ ಕುತ್ತಿಗೆ ನೋವಿಗೆ ಜಿಂದಾಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದ ಅವರು, ಆಪರೇಷನ್ ಕಮಲದ ವಿಚಾರ ನನಗೆ ಗೊತ್ತಿಲ್ಲ. ಯಡಿಯೂರಪ್ಪ, ಈಶ್ವರಪ್ಪ ಬಗ್ಗೆ ನಾನು ಮಾತಾಡುವುದಿಲ್ಲ. ಅವರಿಬ್ಬರೂ ಅವರ ಜನ್ಮದಲ್ಲಿ ಸತ್ಯ ಹೇಳಿಲ್ಲ ಎಂದು ಛೇಡಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ