Latest

ಮಠಗಳಿಂದ ಭಾರತೀಯ ಸಂಸ್ಕೃತಿಗೆ ಮೆರಗು ಬಂದಿದೆ -ಆನಂದ ಮಾಮನಿ

   ಪ್ರಗತಿವಾಹಿನಿ ಸುದ್ದಿ, ಮುನವಳ್ಳಿ

ಕರ್ನಾಟಕದಲ್ಲಿರುವ ಮಠಗಳಿಂದಲೇ ಭಾರತೀಯ ಸಂಸ್ಕೃತಿಗೆ ಒಂದು ಅವಿಚ್ಛಿನ್ನವಾದ ಮೆರಗು ಬಂದಿದೆ. ಮಠಗಳು ಭಕ್ತ ಸಮುದಾಯದ ಹಿತಚಿಂತನೆಯನ್ನು ಮಾಡುವ ಶ್ರದ್ಧಾಕೇಂದ್ರಗಳಾಗಿವೆ ಎಂದು ಶಾಸಕ ಆನಂದ ಮಾಮನಿ ಹೇಳಿದರು.

ಅವರು ಮುನವಳ್ಳಿ ಸೋಮಶೇಖರ ಮಠದಲ್ಲಿ ನಡೆದ ಪ್ರವಚನ ಪ್ರಾರಂಭ ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಸೋಮಶೇಖರ ಮಠದ ಮುರುಘೇಂದ್ರ ಸ್ವಾಮಿಗಳು ಈ ಭಾಗದ ಭಕ್ತ ಸಮುದಾಯದ ಕಾಮಧೇನು-ಕಲ್ಪವೃಕ್ಷವಾಗಿದ್ದಾರೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ಕಲ್ಪತರುವಾಗಿದ್ದಾರೆ. ಅವರ ಸಾಮಾಜಿಕ-ಧಾರ್ಮಿಕ ಸೇವಾ ಕಾರ್ಯಗಳು ಆದರ್ಶವೂ, ಅನುಕರಣೀಯವೂ ಆಗಿವೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಶಿಂದೋಗಿ-ಮುನವಳ್ಳಿ ನಿತ್ಯಾನಂದ ಸತ್ಸಂಗ ಆಶ್ರಮದ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮಿಗಳು, ಧ್ಯಾನ-ಪ್ರವಚನಗಳಿಂದ ಮನುಷ್ಯನ ಮನಸ್ಸು ವಿಕಾಸವಾಗುತ್ತದೆ. ಆ ಕಾರಣಕ್ಕಾಗಿ ಈ ಪೀಠದ ಆದಿಗುರುಗಳ ಪುಣ್ಯಸ್ಮರಣೋತ್ಸವ ಆಚರಿಸುವ ಮೂಲಕ ಸಮಾಜದಲ್ಲಿ ಸ್ಮರಣೀಯ ಸೇವೆ ಸಲ್ಲಿಸಿದ ಪ್ರತಿಭಾವಂತ ಸಾಧಕರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯವೆಂದರು.
ಬೀದರಿ ಕಲ್ಮಠದ ಶ್ರೀ ಶಿವಲಿಂಗ ಸ್ವಾಮಿಗಳು, ಸವದತ್ತಿ ಮೂಲಿಮಠದ ಪೂಜ್ಯ ಮಲ್ಲಿಕಾರ್ಜುನ ಸ್ವಾಮಿಗಳು, ಸಾನಿಧ್ಯ ವಹಿಸಿದ್ದರು. ರಬಕವಿಯ ಶ್ರೀ ಪ್ರಭುದೇವರು ಪ್ರವಚನ ಮಾಡಿದರು. ಯಲ್ಲಮ್ಮ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ರಾಮನಗೌಡ ತಿಪರಾಶಿ,  ಎಫ್. ಯು. ಪೂಜೇರ ಮತ್ತು ಬಿಂಬಭಾವ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ಪಿ. ಕೆ. ಬಡಿಗೇರ ಅವರಿಗೆ ಶ್ರೀಗುರುರಕ್ಷೆ ನೀಡಿ ಸನ್ಮಾನಿಸಲಾಯಿತು.
ಇತ್ತೀಚೆಗೆ ಲಿಂಗೈಕ್ಯರಾದ ಸಿದ್ಧಗಂಗಾಮಠದ ಕರ್ನಾಟಕ ರತ್ನ ಡಾ. ಶಿವಕುಮಾರ ಸ್ವಾಮಿಗಳವರ ಭಾವಚಿತ್ರಕ್ಕೆ ಪುಷ್ಪನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ದೇವರಾಜ ಯರಕಿಹಾಳ ಅವರು ಸಂಗೀತ ಸೇವೆ ಸಲ್ಲಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button