
ಪ್ರಗತಿವಾಹಿನಿ ಬೆಳಗಾವಿ
ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಶನಿವಾರ ಮತದಾರರ ವಿಶೇಷ ನೋಂದಣಿ ಅಭಿಯಾನ ನಡೆಸಲಾಯಿತು.
ಬೆಳಗಾವಿ ತಹಶಿಲ್ದಾರ ಮಂಜುಳಾ ನಾಯಕ ಅವರ ನೇತೃತ್ವದಲ್ಲಿ ಮತದಾರರ ನೋಂದಣಿ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ ಮಂಜುಳಾ ನಾಯಕ, 01-01-2019 ಕ್ಕೆ ಹದಿನೆಂಟು ವರ್ಷ ಪೂರ್ಣಗೊಂಡ ಹೊಸ ಮತದಾರರ ಸೇರ್ಪಡೆ ಹಾಗೂ ಮತದಾರರ ಹೆಸರು, ವಿಳಾಸ ಬದಲಾವಣೆ, ಬೇರೆ ಪ್ರದೇಶಗಳಿಗೆ ವರ್ಗಾವಣೆ ಕೋರಿ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸುವುದು ಈ ವಿಶೇಷ ನೊಂದಣಿ ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಮೂರು ದಿನಗಳ ಈ ಅಭಿಯಾನದ ವೇಳೆ ಸಾರ್ವಜನಿಕರು ತಮಗೆ ಸಂಬಂಧಿಸಿದ ಮತಗಟ್ಟೆಗಳಿಗೆ ತೆರಳಿ ಮತದಾರರ ಯಾದಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6, ತಿದ್ದುಪಡಿಗಾಗಿ ನಮೂನೆ-8, ತೆಗೆದುಹಾಕುವಿಕೆಗಾಗಿ ನಮೂನೆ-7 ಹಾಗೂ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯಲ್ಲಿ ವಿಳಾಸ ಬದಲಾವಣೆಗಾಗಿ ನಮೂನೆ-8ಎ ರಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಮತದಾರರ ನೋಂದಣಿಗೆ ಸಂಬಂಧಿಸಿದಂತೆ ಜಾಗೃತಿ ಜಾಥಾ ನಡೆಸಲಾಯಿತು. ನಂತರ ತಹಸಿಲ್ದಾರ ನೇತೃತ್ವದಲ್ಲಿ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಮತದಾರರ ನೋಂದಣಿ ಕುರಿತು ವಿವರಿಸಿದರಲ್ಲದ ಅರ್ಜಿಗಳನ್ನು ಸ್ವೀಕರಿಸಿದರು.