ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡ ಗ್ರಾಮೀಣ ಶಾಸಕಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಈ ಬಾರಿ ಸಚಿವಸಂಪುಟ ಸೇರುವ ಮಹತ್ವಾಕಾಂಕ್ಷೆಯಲ್ಲಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತೀವ್ರ ನಿರಾಸೆ ಹೊಂದ್ದು, ತಮಗೆ ಸಧ್ಯದಲ್ಲೇ ಮಹತ್ವದ ಜವಾಬ್ದಾರಿಯೊಂದನ್ನು ಪಕ್ಷ ಕೊಡಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ.
ಬೆಳಗಾವಿ ಜಿಲ್ಲೆಯ ಈ ಬಾರಿ ಎರಡು ಸಚಿವಸ್ಥಾನ ಸಿಗಲಿದೆ. ಅದರಲ್ಲಿ ತಮಗೆ ಒಂದು ಖಚಿತ ಎನ್ನುವ ನಿರೀಕ್ಷೆ ಹೆಬ್ಬಾಳ್ಕರ್ ಗೆ ಇತ್ತು. ಆದರೆ ಸಚಿವಸ್ಥಾನ ಮಾತ್ರವಲ್ಲ ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಸಹ ತಮ್ಮನ್ನು ಬಿಟ್ಟು ಜಿಲ್ಲೆಯ ಬೇರೆ ಇಬ್ಬರು ಶಾಸಕರನ್ನು ಪರಿಗಣಿಸಿರುವುದು ಅವರನ್ನು ತೀವ್ರ ನೊಂದುಕೊಳ್ಳುವಂತೆ ಮಾಡಿದೆ.
ಆದಾಗ್ಯೂ ತಮಗೆ ಅತೀ ಶೀಘ್ರದಲ್ಲೇ ಮಹತ್ವದ ಜವಾಬ್ದಾರಿಯನ್ನು ಪಕ್ಷ ನೀಡಲಿದೆ. ತಮ್ಮನ್ನು ಕಡೆಗಣಿಸಲು ಸಾಧ್ಯವೇ ಇಲ್ಲ ಎನ್ನುವ ವಿಶ್ವಾಸದಲ್ಲಿ ಅವರಿದ್ದಾರೆ. ಪ್ರಭಾವಿ ಶಾಸಕಿ ಎಂದೇ ಗುರುತಿಸಿಕೊಂಡಿರುವ ಅವರನ್ನು ಕಡೆಗಣಿಸಿರುವ ಕುರಿತು ಪ್ರಗತಿವಾಹಿನಿ ಪ್ರಶ್ನಿಸಿದಾಗ, “ಕಾದು ನೋಡಿ” ಎಂದಷ್ಟೆ ಹೇಳಿದರು. ಬೇರೆ ಶಾಸಕರಂತೆ ಹೆಬ್ಬಾಳ್ಕರ್ ಪಕ್ಷ ಬಿಡುವ ಸಾಧ್ಯತೆ ಇಲ್ಲದಿರುವುದರಿಂದ ಅವರ ಕಾದು ನೋಡಿ ಎನ್ನುವ ಮಾತು ಪ್ರಮುಖ ಹುದ್ದೆಯೊಂದು ಅವರಿಗೆ ಒಲಿಯುವ ಸೂಚನೆಯಂತಿದೆ.
ಕ್ಷೇತ್ರದ ಕೆಲಸದಲ್ಲಿ:
ಶನಿವಾರ ಹೈಕಮಾಂಡ್ ನಿಂದ ಯಾವುದೇ ಕರೆ ಬಾರದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಕ್ಷೇತ್ರದ ಕೆಲಸದಲ್ಲಿ ತೊಡಗಿಕೊಂಡಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಿಣಯೇ ಡ್ಯಾಂ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, ಹೆಬ್ಬಾಳಕರ ಶನಿವಾರ ಕಾಮಗಾರಿಯನ್ನು ಪರಿಶೀಲಿಸಿ ಎಡದಂಡೆ ಕಾಲುವೆ ಮತ್ತು ಬಲದಂಡೆ ಕಾಲುವೆಗೆ ಭೂಮಿ ಪೂಜೆ ನೆರವೆರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಕರ್ನಾಟಕ ನೀರಾವರಿ ನಿಗಮದಿಂದ ಸುಮಾರು 58 ಕೋಟಿ ರೂಪಾಯಿ ವೆಚ್ಚದಲ್ಲಿ ಕಿಣಯೇ ಡ್ಯಾಂ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಈಗ ಮುಕ್ತಾಯದ ಹಂತದಲ್ಲಿರುವ ಹಿನ್ನೆಲೆಯಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ಎಡದಂಡೆ ಮತ್ತು ಬಲದಂಡೆ ಕಾಲುವೆ ನಿರ್ಮಾಣದ ಕಾಮಗಾರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಪೂಜೆ ನೆರವೆರಿಸಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡ್ಯಾಂನ ವ್ಯಾಪ್ತಿಯಲ್ಲಿ ಸುಮಾರು 10 ಕಿಲೋಮೀಟರ್ ಉದ್ದದ ಎರಡು ಕಾಲುವೆಗಳನ್ನು ನಿರ್ಮಿಸಲಾಗುತ್ತಿದೆ. ಬಲದಂಡೆಯ ಕಾಲುವೆ 6 ಕಿಲೋ ಮೀಟರ್ ಉದ್ದ ನಿರ್ಮಿಸಲಾಗುತ್ತಿದ್ದು, ಕಿಣಯೇ, ರಣಕುಂಡೆ, ಸಂತಿಬಸ್ತವಾಡ ವಾಗವಾಡೆ ಗ್ರಾಮಗಳ ಸುಮಾರು ಎರಡೂವರೆ ಸಾವಿರ ಎಕರೆ ಭೂಮಿಗೆ ನೀರಾವರಿ ಕಲ್ಪಿಸಲಿದೆ. ಎಡದಂಡ ಕಾಲುವೆ 4 ಕಿಲೋಮೀಟರ್ ಉದ್ದ ನಿರ್ಮಿಸಲಾಗುತ್ತಿದ್ದು, ಈ ಕಾಲುವೆ ಕಿಣಯೇ ಮತ್ತು ಬಾದರವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಒಂದು ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಿದ್ದು, ಒಂದು ಕಾಲುವೆ ವಾಗವಾಡೆ ಗ್ರಾಮದ ಕೆರೆಗೆ ಮುಕ್ತಾಯವಾಗಲಿದ್ದು, ಇನ್ನೊಂದು ಕಾಲುವೆ ಬಾದರವಾಡಿ ಗ್ರಾಮದ ಕೆರೆಗೆ ಮುಟ್ಟಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಇದೇ ಡ್ಯಾಂನ್ ಮೂಲಕ ಸುತ್ತಮುತ್ತಲಿನ ಗ್ರಾಮಗಳ ಕೆರೆ ತುಂಬಿಸುವ ಯೋಜನೆ ರೂಪಿಸಿ ಅದಕ್ಕೆ ಮಂಜೂರಾತಿ ಪಡೆಯುವ ಸಂಕಲ್ಪ ಮಾಡಿದ್ದೇನೆ ಎಂದು ಭರವಸೆ ನೀಡಿದರು.
ಕಿಣಯೇ ಗ್ರಾಮದ ಹಿರಿಯ ಮುಖಂಡ ತಾನಾಜಿ ಡೂಕರೆ ಮಾತನಾಡಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕ್ಷೇತ್ರದಲ್ಲಿ ಅಭಿವೃದ್ದಿಯ ಪರ್ವವನ್ನು ಆರಂಭಿಸಿದ್ದು, ಅವರ ಇಚ್ಛಾಶಕ್ತಿ ಮತ್ತು ಸಾಮಾಜಿಕ ಕಳಕಳಿಯಿಂದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಲೆಗಳು, ರಸ್ತೆಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ. ಅವರಿಂದ ಕ್ಷೇತ್ರದ ಅಭಿವೃದ್ದಿ ಸಾಧ್ಯ ಎನ್ನುವ ವಿಶ್ವಾಸ ಮೂಡಿದೆ ಎಂದು ಹೇಳಿದರು.
ಯುವರಾಜ ಕದಂ, ನೀರಾವರಿ ಇಲಾಖೆಯ ಮುಖ್ಯ ಇಂಜನಿಯರ್, ಸುರೇಶ ಡೂಕರೆ, ನಾರಾಯಣ ಗುರವ್ ಸೇರಿದಂತೆ ಮೊದಲಾದ ಮುಖಂಡರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ