ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ನಗರದ ನಾಯ್ಕರ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳಾದ ರವೀಂದ್ರನಾಥ ಠಾಗೋರ ಪದವಿ-ಪೂರ್ವ ವಿಜ್ಞಾನ ಮಹಾವಿದ್ಯಾಲಯ ಮತ್ತು ಗುಡಶೆಪರ್ಡ ವಿಜ್ಞಾನ ಮಹಾವಿದ್ಯಾಲಯದ 2018ರ ವಾರ್ಷಿಕ ಕ್ರೀಡಾಕೂಟ ಶುಕ್ರವಾರ ಗುಡಶೆಪರ್ಡ ಕ್ರಿಡಾಂಗಣದಲ್ಲಿ ಜರುಗಿತು.
ಕ್ರೀಡಾಕೂಟವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಉದ್ಘಾಟಿಸಿ, ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆ, ಶೈಕ್ಷಣಿಕ ಪ್ರಗತಿಯಲ್ಲಿ ಮಹತ್ತರ ಪಾತ್ರವಹಿಸುತ್ತದೆ. ಈ ಮಾನಸಿಕ ಮತ್ತು ಬೌದ್ದಿಕ ಬೆಳವಣಿಗೆಯನ್ನು ಕ್ರೀಡೆಗಳಿಂದ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಕೇವಲ ಮಾರ್ಕ್ಸವಾದಿಗಳಾಗಿದ್ದು ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಅಪೇಕ್ಷಿಸುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಕ್ರೀಡೆ ಅತ್ಯವಶ್ಯಕ. ಕ್ರೀಡಾ ಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆಯಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಿಗೆ ಹಿಂಜರಿಕೆ ಮನೋಭಾವನೆ ಇರಬಾರದು, ಛಲಬಿಡದೆ ಧನಾತ್ಮಕ ಮನೋಭಾವದಿಂದ ಗುರಿ ಸೇರಬೇಕು. ಮನುಷ್ಯನಲ್ಲಿರುವ ದೈಹಿಕ ನೂನ್ಯತೆಗಳು ಯಾವುದೆ ಸಾಧನೆಗೆ ಅಡ್ಡಿಯಾಗಲಾರದು. ದೃಢ ಸಂಕಲ್ಪದಿಂದ ಗುರಿಯನ್ನು ಮುಟ್ಟಬಹುದು. ಗುರಿ ತಲುಪಲು ಪೋಷಕರ ಪಾತ್ರವು ಮಹತ್ವವಾಗಿದ್ದು ವಿದ್ಯಾರ್ಥಿಗಳು ಪೋಷಕರ ಮಾರ್ಗದರ್ಶನದೊಂದಿಗೆ ಸಾಗಬೇಕೆಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ.ಸಿ.ಎನ್.ನಾಯ್ಕರ, ಇಂದಿನ ವಿದ್ಯಾರ್ಥಿಗಳು ಮೊಬೈಲ್ ನಲ್ಲಿ ಲಭ್ಯವಿರುವ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿವಹಿಸುತ್ತಿರುವುದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಅನಾರೋಗ್ಯಕ್ಕೆ ಒಳಗಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಿದ್ದಾರೆ. ಇದನ್ನು ಮನಗಂಡು ನಾಯ್ಕರ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಸ್ಪರ್ದಾತ್ಮಕ ಶೈಕ್ಷಣಿಕ ಪರಿಸರದೊಂದಿಗೆ ಇಂತಹ ಕ್ರೀಡಾಕೂಟವನ್ನು ಏರ್ಪಡಿಸುತ್ತಿದೆ ಎಂದರು.
ವೇದಿಕೆಯ ಮೇಲೆ ನಾಯ್ಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಸಿ. ನಾಯ್ಕರ, ದೈಹಿಕ ಶಿಕ್ಷಣ ನೀರ್ದೆಶಕ ಜಿ.ಎನ್.ಪಾಟೀಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ