ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳುವ ದಿನ, ಮೇ 23ರಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಮಹಾಘಟ್ ಬಂಧನದ ನಾಯಕರ ಸಭೆ ಕರೆದು ಕುತೂಹಲ ಕೆರಳಿಸಿದ್ದಾರೆ.
ತಮಿಳುನಾಡಿನ ಡಿಎಂಕೆ ಮುಖಂಡ ಎಂಕೆ ಸ್ಟಾಲಿನ್, ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ, ಎನ್ ಸಿಪಿ ಮುಖಂಡ ಶರದ್ ಪವಾರ್, ಉತ್ತರ ಪ್ರದೇಶದ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಮುಖಂಡರಾದ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಅವರಿಗೆ ಈಗಾಗಲೇ ಸೋನಿಯಾ ಗಾಂಧಿ ಪತ್ರ ಬರೆದಿದ್ದಾರೆ.
ಮೇ 21 ರಂದು ವಿಪಕ್ಷಗಳೆಲ್ಲವೂ ಸೇರಿ ಸಭೆ ನಡೆಸಿ, ಪ್ರಧಾನಿ ಅಭ್ಯರ್ಥಿ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ ಎನ್ನಲಾಗಿತ್ತು. ಆದರೆ ಇದೀಗ ಮೇ 23 ರಂದು ವಿಪಕ್ಷಗಳ ಸಭೆ ನಿಗದಿಯಾಗಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್, ವೈಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ, ಒಡಿಶಾ ಮುಖ್ಯಮಂತ್ರಿ, ಬಿಜೆಡಿ ಮುಖಂಡ ನವೀನ್ ಪಟ್ನಾಯಕ್ ಅವರನ್ನೂ ಸೋನಿಯಾ ಗಾಂಧಿ ಆಮಂತ್ರಿಸಲಿದ್ದಾರೆ ಎನ್ನಲಾಗಿದೆ. ಜೊತೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರನ್ನೂ ಕಾಂಗ್ರೆಸ್ ಆಮಂತ್ರಿಸಲಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ರಚಿಸುವುದನ್ನು ತಡೆಯುವುದು ಈ ಸಭೆಯ ಉದ್ದೇಶ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ